ಎಫ್‍ಎಂ ರೇನ್‍ಬೋ ಉಳಿಸಲು ಹೆಚ್‌ಡಿಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ಸಂಸದರೆಲ್ಲರೂ ದನಿಯೆತ್ತಿ ಎಫ್‍ಎಂ ರೇನ್ ಬೋ ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿಯನ್ನು ಉಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ  ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರೇಡಿಯೋ ಮುಚ್ಚುವುದು ಅಥವಾ ಇನ್ನೊಂದರಲ್ಲಿ ವಿಲೀನ ಮಾಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕøತಿಕವಾಗಿ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಇನ್ನೊಂದು ಸಾಕ್ಷಿ. ಈಗ ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಸೂರ್ಯೋದಯಕ್ಕೂ ಮುನ್ನವೇ ಪ್ರಸಾರ ಆರಂಭಿಸಿ ರಾತ್ರಿ 11ರ ತನಕ ಸತತ 18 ಗಂಟೆ ಕಾಲ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಿರುವ 101.3 ಎಫ್‍ಎಂ ರೇನ್‍ಬೋ ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿಯ ಕತ್ತು ಕೊಯ್ಯುವ ಕೆಲಸಕ್ಕೆ ಕೇಂದ್ರ ಸರಕಾರ ಹೊರಟಿರುವುದು ಅಕ್ಷಮ್ಯ. ಕನ್ನಡಕ್ಕೆ ಕೊಡಲಿ ಪೆಟ್ಟು.

ರೇನ್ ಬೋ ಕನ್ನಡ ಕಾಮನಬಿಲ್ಲು ಕೇವಲ ರೇಡಿಯೋ ವಾಹಿನಿ ಮಾತ್ರವಲ್ಲ, ಕನ್ನಡಿಗರ ಹೃದಯ ಬಡಿತ, ಕನ್ನಡದ ಅಸ್ಮಿತೆ ಕೂಡ. ಆದರೆ, ಕೇಂದ್ರ ಸರ್ಕಾರ ಕನ್ನಡಿಗರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಅಕಾರಿಗಳ ಮೂಲಕ ಕನ್ನಡಮ್ಮನ ರಕ್ತ ಬಗೆಯುವ ಹೀನ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಕನ್ನಡಿಗರ ಮನೆಮನದಲ್ಲಿ ತುಂಬಿದ್ದ ಅಮೃತವರ್ಷಿಣಿಯನ್ನು ಮುಗಿಸಲಾಯಿತು. ಈಗ ಕನ್ನಡ ಕಾಮನಬಿಲ್ಲನ್ನು ಮುಗಿಸಲು ಹೊರಟಿದ್ದಾರೆ. ಕನ್ನಡ ವಿರೋಧಿ ಕೇಂದ್ರ ಸರ್ಕಾರ, ಕನ್ನಡ ದ್ರೋಹಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕನ್ನಡದ ಆಕ್ರಂದನವನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಆಯಕಟ್ಟಿನಲ್ಲಿ ಕೂತಿರುವ ಹಿರಿಯ ಅಕಾರಿಗಳು ಕಸಾಯಿಗಳಂತೆ ಸಾವಿರಾರು ವರ್ಷಗಳ ಅಭಿಜÁತ ಭಾಷೆ ಕನ್ನಡದ ಮೇಲೆ ದಾಳಿ ನಡೆಸಿ ಕ್ರೂರವಾಗಿ ವಧೆ ಮಾಡುತ್ತಿದ್ದಾರೆ. ಕನ್ನಡನಾಡನ್ನು ಉದ್ಧಾರ ಮಾಡುತ್ತೇವೆಂದು ಗೆದ್ದುಹೋದ ಸಂಸದ ಮಹಾಶಯರು ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸುತ್ತಿರುವುದು ಹೊಣೆಗೇಡಿತನವೇ ಸರಿ ಎಂದು ಟೀಕಿಸಿದ್ದಾರೆ.

ಕನ್ನಡಿಗರು ಸಹಿಷ್ಣುಗಳು, ಸೌಮ್ಯರೂ ಹೌದು. ಹಾಗೆಂದು, ತಾಯಿಭಾಷೆಗೆ ಕೊಳ್ಳಿ ಇಡುತ್ತಿರುವ ಭಾಷಾಂತಕರನ್ನು ನೋಡುತ್ತಾ ಸುಮ್ಮನೆ ಕೂರಲಾರರು, ನೆನಪಿರಲಿ. ಎಫ್‍ಎಂ ರೇನ್‍ಬೋದ ಬಹುತೇಕ ನಿರೂಪಕರು ಅರೆಕಾಲಿಕ ಉದ್ಯೋಗಿಗಳು. ಸ್ಪಷ್ಟ ಕನ್ನಡ, ಅಚ್ಚ ಕನ್ನಡದ ರಾಯಭಾರಿಗಳು. ಅರ್ಥಪೂರ್ಣ ಕಾರ್ಯಕ್ರಮ, ಸುಶ್ರಾವ್ಯ ಹಾಡುಗಳ ಮೂಲಕ ಕೇಳುಗರೊಂದಿಗೆ ಸಂವಾದಿಯಾದವರು.

ಈಗ ವಾಹಿನಿಯನ್ನೇ ನಿಲ್ಲಿಸುವ ಒಳಸಂಚು ಇವರೆಲ್ಲರಿಗೂ ಆಗುವ ಅನ್ಯಾಯ ಹಾಗೂ ಕನ್ನಡ, ಕನ್ನಡಿಗರಿಗೆ ಮಾಡುವ ಅಪಚಾರ. ಕನ್ನಡಿಗರಿಗೆ ಕಿರುಕುಳ ನೀಡಿ ವಿಕೃತ ಸಂತೋಷಪಡುವ ಮನಃಸ್ಥಿತಿ ಅಳಿಯಲಿ. ಭಾರತ ಒಕ್ಕೂಟ ರಾಜ್ಯಗಳ ಆಗರ ಎನ್ನುವುದು ನೆನಪಿರಲಿ. ಆ ಆಶಯಕ್ಕೆ ಮುಕ್ಕಾಗುವುದು ಖಂಡಿತಾ ಬೇಡ ಎಂದು ಹೇಳಿದ್ದಾರೆ.

Facebook Comments