ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ವಿತರಿಸಲು ಉಚಿತ ಆಹಾರದ ವಿಶೇಷ ಕಿಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.17- ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿ ಹಾನಿಗೊಳಗಾಗಿರುವ ಸಂತ್ರಸ್ತ ಕುಟುಂಬಗಳಿಗೆ ಆಹಾರ ಭದ್ರತೆಗಾಗಿ ಆಹಾರ ಪ್ಯಾಕೆಟ್‍ಗಳ ವಿಶೇಷ ಕಿಟ್‍ಗಳನ್ನು ಉಚಿತವಾಗಿ ನೀಡಲು ಸರ್ಕಾರ ಆದೇಶಿಸಿದೆ.

10 ಕೆಜಿ ಅಕ್ಕಿ, 1 ಲೀಟರ್ ತಾಳೆ ಎಣ್ಣೆ, 1 ಕೆಜಿ ಅಯೋಡಿನ್‍ಯುಕ್ತ ಉಪ್ಪು, 1 ಕೆಜಿ ತೊಗರಿಬೇಳೆ, 1 ಕೆಜಿ ಸಕ್ಕರೆ, 5 ಲೀಟರ್ ಸೀಮೆಎಣ್ಣೆ ಒಳಗೊಂಡ ವಿಶೇಷ ಆಹಾರ ಪ್ಯಾಕೆಟ್‍ಗಳನ್ನು ರಾಜ್ಯದ 9 ಜಿಲ್ಲೆಗಳಿಗೆ ಒಂದೂವರೆ ಲಕ್ಷ ಕಿಟ್‍ಗಳನ್ನು ವಿತರಿಸಲು ಆದೇಶ ನೀಡಿದೆ.

ಬೆಳಗಾವಿ ಜಿಲ್ಲೆಗೆ 50 ಸಾವಿರ ಕಿಟ್ ಹಾಗೂ ಉತ್ತರ ಕನ್ನಡ ಜಿಲ್ಲೆಗೆ 5 ಸಾವಿರ ಕಿಟ್‍ಗಳನ್ನು ವಿತರಿಸಲಾಗಿದ್ದು, ಭಾರೀ ಮಳೆಯಿಂದಾಗಿ ಸಂತ್ರಸ್ತ ಕುಟುಂಬಗಳು ಹೆಚ್ಚಾಗಿರುವುದರಿಂದ 40,000 ಕಿಟ್‍ಗಳನ್ನು ಹೆಚ್ಚುವರಿಗಾಗಿ ಬಿಡುಗಡೆ ಮಾಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಬೆಳಗಾವಿಗೆ 35,000, ಉತ್ತರ ಕನ್ನಡ ಜಿಲ್ಲೆಗೆ 5000 ಕಿಟ್‍ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ವಿತರಿಸಲಾಗುತ್ತಿದೆ.

ವಿಶೇಷ ಆಹಾರದ ಪ್ಯಾಕೆಟ್‍ಗಳನ್ನು ಸಿದ್ಧಪಡಿಸಲು ಅಗತ್ಯ ಸಾಮಗ್ರಿಗಳ ಸಂಗ್ರಹಣೆ, ಪ್ಯಾಕಿಂಗ್ ವ್ಯವಸ್ಥೆ ಇತ್ಯಾದಿ ಎಲ್ಲ ಜವಾಬ್ದಾರಿಗಳನ್ನು ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.

ಆಹಾರದ ಪ್ಯಾಕೆಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ಅವರು ವಾಸಿಸುವ ಗ್ರಾಪಂ ಮತ್ತು ನಗರ ಪ್ರದೇಶಗಳಾದಲ್ಲಿ ಪುರಸಭೆ/ಪಟ್ಟಣ ಪಂಚಾಯಿತಿ, ಜಿಲ್ಲಾಧಿಕಾರಿಗಳಿಂದ ಅನುಮೋದಿಸಲ್ಪಡುವ ಕೋರಿಕೆಯಂತೆ ವಿತರಿಸಲು ಸೂಚಿಸಲಾಗಿದೆ.

Facebook Comments

Sri Raghav

Admin