ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ 3 ದಿನ ಭಾರೀ ಮಳೆ ಸಾಧ್ಯತೆ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.21-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಿನ್ನೆ ಕೂಡ ರಾಜ್ಯದ ಬಹುತೇಕ ಕಡೆ ಉತ್ತಮ ಮಳೆಯಾದ ವರದಿಯಾಗಿದೆ.  ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಿದ್ದರೆ ಮತ್ತೆ ಕೆಲವೆಡೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಹವಾ ಮುನ್ಸೂಚನೆ ಪ್ರಕಾರ ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿರುವುದರಿಂದ ಇದೇ ರೀತಿ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಅಲ್ಲದೆ ಉತ್ತರಕರ್ನಾಟಕ ಭಾಗದಲ್ಲಿ ಟ್ರಪ್ ಕೂಡ ಹಾದುಹೋಗಿದೆ. ಇದರಿಂದಾಗಿ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಹಗುರ ಇಲ್ಲವೇ ಸಾಧಾರಣವಾಗಿ ಮಳೆಯಾಗುವ ಸಾಧ್ಯತೆಗಳಿವೆ.  ವಾಯುಭಾರ ಕುಸಿತದ ಪರಿಣಾಮ ಅ.23ರವರೆಗೂ ರಾಜ್ಯದಲ್ಲಿ ಮಳೆಯಾಗಲಿದೆ. ಅದರಲ್ಲೂ ಮಧ್ಯ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲೂ ಇನ್ನು ಎರಡು ದಿನ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ ಎಂದರು.

ಕಳೆದ ಎರಡು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಮುಂಗಾರಿನ ಹಂಗಾಮಿನ ಫಸಲು ಕೆಲವು ಕಡೆ ಹಾನಿಗೀಡಾಗಿದೆ. ಉತ್ತರಕರ್ನಾಟಕ ಸೇರಿದಂತೆ ಅತಿವೃಷ್ಟಿ ಹಾಗೂ ಪ್ರವಾಹದಿಂದಲೂ ಹಾನಿಯಾಗಿದೆ. ಸದ್ಯಕ್ಕೆ ಮಳೆ ಮುಂದುವರೆ ಯುತ್ತಿರುವುದರಿಂದ ಮುಂಗಾರು ಹಂಗಾಮಿನ ಬೆಳೆ ಮೇಲೆ ಮಾರಕ ಪರಿಣಾಮವು ಉಂಟಾಗುತ್ತಿದೆ ಎಂದು ಹೇಳಿದರು.

# ಮಳೆ ವಿವರ ಮಿ.ಮೀಟರ್‍ನಲ್ಲಿ :
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಬೆಂಗಳೂರು ದಕ್ಷಿಣ 138, ಬೆಂಗಳೂರು ಉತ್ತರ 118, ಬೆಂಗಳೂರು ಪೂರ್ವ 70, ಆನೇಕಲ್ 70, ಚಿಕ್ಕಮಗಳೂರು 50, ದ.ಕನ್ನಡ 42, ಉಡುಪಿ 110, ಹಾಸನ 114, ಮಂಡ್ಯ 68, ಮೈಸೂರು 61, ಚಾಮರಾಜನಗರ 61, ಯಾದಗಿರಿ 40, ಬೀದರ್ 26, ಉತ್ತರ ಕನ್ನಡ 67, ಬಳ್ಳಾರಿ 84, ಕೊಪ್ಪಳ 94, ರಾಯಚೂರು 166, ಕಲಬುರಗಿ 32, ಧಾರವಾಡ 92, ಹಾವೇರಿ 88, ಗದಗ 46, ಬಾಗಲಕೋಟೆ 59, ಬೆಳಗಾವಿ 78, ಶಿವಮೊಗ್ಗ 34, ದಾವಣಗೆರೆ 113, ಚಿತ್ರದುರ್ಗ 126, ತುಮಕೂರು 107, ಬೆಂಗಳೂರು ಗ್ರಾಮಾಂತರ 166, ರಾಮನಗರ 104, ಕೋಲಾರ 47, ಚಿಕ್ಕಬಳ್ಳಾಪುರ 52 ಮಿ.ಮೀಟರ್‍ನಷ್ಟು ಗರಿಷ್ಠ ಪ್ರಮಾಣದ ಮಳೆಯಾಗಿದೆ.

Facebook Comments