ನೈಸರ್ಗಿಕ ಸಂಪತ್ತನ್ನು ಬೆಳೆಸಲು ಪ್ರಾಮಾಣಿಕ ಸೇವೆ ಸಲ್ಲಿಸಿ: ಅರಣ್ಯ ಅಧಿಕಾರಿಗಳಿಗೆ ಸಿಎಂ ಕಿವಿಮಾತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.23-ರಾಜ್ಯದ ಅರಣ್ಯ, ಜೀವಜಲ ಹಾಗೂ ನೈಸರ್ಗಿಕ ಸಂಪತ್ತನ್ನು ಬೆಳೆಸಿ ಉಳಿಸುವುದು ನಮ್ಮ ಕರ್ತವ್ಯವಾಗಿದ್ದು, ಅಧಿಕಾರಿಗಳು ಇನ್ನಷ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಕಿವಿಮಾತು ಹೇಳಿದರು. ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ವತಿಯಿಂದ ನಡೆದ 2017-18 ಹಾಗೂ 19ನೇ ಸಾಲಿನಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮಾಡಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ ಕರ್ನಾಟಕ ಅರಣ್ಯ ವನ್ಯಜೀವಿ ಸಂರಕ್ಷಣೆಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂದಿನ ಪೀಳಿಗೆಗೆ ಇದನ್ನು ಸಂರಕ್ಷಣೆ ಮಾಡುವುದು ಅಗತ್ಯವಿದೆ. ಅಧಿಕಾರಿಗಳಿಂದ ಹಿಡಿದು ಎಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಮಾತ್ರ ಇದು ಸಾದ್ಯವಾಗುತ್ತದೆ ಎಂದು ಸಲಹೆ ಮಾಡಿದರು.

ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ, ಉದ್ಯೋಗ ಸೇರಿದಂತೆ ಮತ್ತಿತರ ಕಾರಣಗಳಿಂದ ಅರಣ್ಯದ ಮೇಲೆ ನಿರಂತರವಾಗಿ ಒತ್ತಡ ಹೆಚ್ಚಾಗುತ್ತಿದೆ. ಆದರೂ ಅರಣ್ಯ ಮತ್ತು ವನ್ಯಜೀವಿಯನ್ನು ಸಂರಕ್ಷಣೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದರು. ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವನ್ಯಜೀವಿ ಸಂಪತ್ತು ಮೊದಲ ಸ್ಥಾನದಲ್ಲಿದೆ.

ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ 524 ಹುಲಿಗಳಿದ್ದು, 2ನೇ ಸ್ಥಾನದಲ್ಲಿದೆ. ಕರ್ನಾಟಕ ಯಾವುದೇ ರಾಜ್ಯಗಳಿಗೂ ವನ್ಯಸಂಪತ್ತಿನಲ್ಲಿ ಕಡಿಮೆ ಇಲ್ಲ . ಕೃಷಿ ಚಟುವಟಿಕೆ ಹೆಚ್ಚುತ್ತಿರುವುದರಿಂದ ಅರಣ್ಯವನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ನಮ್ಮಲ್ಲಿ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದೆ. ಪಶ್ಚಿಮ ಘಟ್ಟ ಸೇರಿದಂತೆ ಇತರೆ ಭಾಗಗಳಲ್ಲೂ ಅರಣ್ಯ ಮತ್ತು ವನ್ಯಜೀವಿ ಸಂಪತ್ತಿದೆ.

ಒತ್ತಡಗಳನ್ನು ಮೀರಿ ಅರಣ್ಯ ಸಂರಕ್ಷಣೆಗೆ ಅಕಾರಿಗಳು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಪದಕ ಪಡೆದವರು ಮಾತ್ರ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂಬ ಮನೋಭಾವನೆ ಬೇಡ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಇದೇ ರೀತಿ ಕೆಲಸ ಮಾಡಿದರೆ ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಸಲಹೆ ಮಾಡಿದರು.

ಕರ್ನಾಟಕದಲ್ಲಿ ಶೇ.20ರಷ್ಟು ಭೂಭಾಗ ಮೀಸಲು ಅರಣ್ಯ ಪ್ರದೇಶವಿದೆ. ನಮ್ಮಲ್ಲಿ ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನವನಗಳು, ಸಿಂಹಧಾಮ,ಹುಲಿಧಾಮ, ಆನೆ ಧಾಮಗಳಿವೆ. ಇದನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು. ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ, ಪೊಲೀಸ್ ಇಲಾಖೆಗೆ ಹೋಲಿಸಿದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸವಲತುಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದನ್ನು ಸರಿಪಡಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಆದಷ್ಟು ಶೀಘ್ರ ಇದನ್ನು ಸರಿಪಡಿಸುವ ಆಶ್ವಾಸನೆ ನೀಡಿದರು.

ದೇಶದಲ್ಲೇ ಕರ್ನಾಟಕ ಅರಣ್ಯ ಇಲಾಖೆ ಬೇರೆ ರಾಜ್ಯಗಳಿಗೂ ಮಾದರಿಯಾಗಿದೆ. ಇದಕ್ಕೆ ಕಾರಣ ನಮ್ಮ ಅಧಿಕಾರಿ ಸಿಬ್ಬಂದಿಗಳ ಪರಿಶ್ರಮ ಎಂದು ಪ್ರಶಂಸಿಸಿದರು. ಲಾಕ್‍ಡೌನ್ ಸಂದರ್ಭದಲ್ಲಿ ಅರಣ್ಯ ಸಂಪತ್ತು ಹೆಚ್ಚಿನ ಪ್ರಮಾಣದಲ್ಲಿ ವೃದ್ದಿಸಿದೆ. ಉತ್ತರ ಕರ್ನಾಟಕದಲ್ಲಿ ಹಸಿರು ವಾತಾವರಣ ಮೂಡಿದೆ. ಇದಕ್ಕೆ ಅಕಾರಿ ಮತ್ತು ಸಿಬ್ಬಂದಿಗಳೇ ಕಾರಣ. ಅರಣ್ಯ ಮತ್ತು ಪರಿಸರ ಉತ್ತಮವಾಗಿದ್ದರೆ ಜಗತ್ತು ಉಳಿಯುತ್ತದೆ. ಅದು ಇಲ್ಲದಿದ್ದರೆ ಏನೂ ಸಿಗುವುದಿಲ್ಲ. ಅರಣ್ಯವನ್ನು ಉಳಿಸಲು ಶ್ರಮಿಸಿದವರಿಗೆ ಇಂದು ಮುಖ್ಯಮಂತ್ರಿಗಳ ಪದಕವನ್ನು ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಇದೇ ರೀತಿ ಯಾರು ಉತ್ತಮವಾಗಿ ಕೆಲಸ ಮಾಡುತ್ತಾರೋ ಅವರಿಗೆ ಪದಕ ನೀಡಿ ಪ್ರೋತ್ಸಾಹಿಸಲಾ ಗುವುದು ಎಂದು ಹೇಳಿದರು. ಅರಣ್ಯ ಮತ್ತು ವನ್ಯಜೀವಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅನಂತ್‍ಕುಮಾರ್ ಹೆಗಡೆ ಅಶಿಸರ ಮಾತನಾಡಿ, ಮುಖ್ಯ ಮಂತ್ರಿ ಯಡಿಯೂರಪ್ಪ ಅರಣ್ಯ ಇಲಾಖೆಗೆ ಬೇಕಾದಂತಹ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ಅರ್ಧದಷ್ಟು ಸಿಬ್ಬಂದಿ ಕೊರತೆ ಇತ್ತು. ಅವರು ಅಕಾರಕ್ಕೆ ಬಂದ ನಂತರ ಅನೇಕ ಸಿಬ್ಬಂದಿಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಸಂದರ್ಭದಲ್ಲಿ ಸೈನಿಕರು, ಪೊಲೀಸರು, ಆರೋಗ್ಯ ಕಾರ್ಯಕರ್ತೆಯರು, ಅಕಾರಿಗಳು ಹೇಗೆ ಕೆಲಸ ಮಾಡಿದರು, ಅದೇ ರೀತಿ ಅರಣ್ಯ ಇಲಾಖೆ ಅಕಾರಿಗಳು ಕೂಡ ತಮ್ಮ ಜೀವದ ಹಂಗು ತೊರೆದು ಕೆಲಸ ನಿರ್ವಹಿಸಿದ್ದಾರೆ. ಅವರು ಕೂಡ ಒಂದು ರೀತಿ ವಾರಿಯರ್ಸ್‍ಗಳು. ನಮ್ಮಲ್ಲಿ ಮಹಿಳಾ ಸಿಬ್ಬಂದಿಗಳಿದ್ದು, ಅವರಿಗೆ ಇನ್ನಷ್ಟು ತರಬೇತಿ ನೀಡುವ ಅಗತ್ಯವಿದೆ. ಇದರಿಂದ ಸ್ವಯಂ ರಕ್ಷಣೆ ಹಾಗೂ ಇಲಾಖೆಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದುಬೆ, ವಿಧಾನಪರಿಷತ್ ಸದಸ್ಯ ರಮೇಶಗೌಡ ಮತ್ತಿತರರು ಉಪಸ್ಥಿತರಿದ್ದರು.

Facebook Comments