ಬಿಗ್ ಬಾಂಬ್ ಸಿಡಿಸಿದ ದೇವೇಗೌಡರು, ರಾಜ್ಯ ರಾಜಕೀಯದಲ್ಲಿ ಸಂಚಲನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.21- ಮೈತ್ರಿ ಪಕ್ಷದ ನಾಯಕರ ನಡವಳಿಕೆಗಳಿಂದ ಬೇಸತ್ತಿರುವ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಮೂಲಕ ದೋಸ್ತಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಬಟಾ ಬಯಲಾಗಿದೆ. ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈತ್ರಿಯಿಂದಲೇ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ದೂರು ನೀಡಿದ ಬೆನ್ನಲ್ಲೇ ಗೌಡರು ಈ ರೀತಿ ಹೇಳಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ.

ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಪದ್ಮನಾಭನಗರ ನಿವಾಸದಲ್ಲಿ ಯೋಗಾಭ್ಯಾಸ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದರ ಬಗ್ಗೆ ಯಾವುದೇ ಸಂಶಯ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್‍ಗೆ ನೇರವಾಗಿಯೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

ಕಾಂಗ್ರೆಸ್ ಮುಖಂಡರಿಗೆ ಸರ್ಕಾರ ನಡೆಸಬೇಕೆಂಬ ಮನಸ್ಸು ಇದೆಯೋ ಇಲ್ಲವೋ ನನಗೆ ಅರ್ಥವಾಗುತ್ತಿಲ್ಲ. ಪ್ರತಿಯೊಂದಕ್ಕೂ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಮಾತನಾಡುತ್ತಿದ್ದಾರೆ. ಇದರ ಅಗತ್ಯವಾದರೂ ಏನಿದೆ ಎಂದು ಪ್ರಶ್ನೆ ಮಾಡಿದರು.

ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತೋ ಯಾರಿಗೂ ಗೊತ್ತಿಲ್ಲ. ಎಲ್ಲವೂ ಕಾಂಗ್ರೆಸ್ ನಾಯಕರ ಕೈಯಲ್ಲೇ ಇದೆ. ಸಾರ್ವತ್ರಿಕ ಚುನಾವಣೆ ಬಳಿಕ ಕಾಂಗ್ರೆಸ್ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದೆ. ಆದರೂ ನಾವು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇವೆಂದು ಸೂಕ್ಷ್ಮವಾಗಿ ಹೇಳಿದರು.

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ವೇಳೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಜನಾದೇಶ ಬರಲಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದೆಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಓಡೋಡಿ ಬಂದು ಮೈತ್ರಿ ಮಾಡಿಕೊಳ್ಳಲು ಮುಂದಾದರು. ನಾವೇನು ಸರ್ಕಾರ ರಚನೆ ಮಾಡಲು ಮುಂದಾಗಿದ್ದೇವಾ ಎಂದು ಪ್ರಶ್ನಿಸಿದರು.

ಸರ್ಕಾರ ರಚನೆ ಮಾಡುವಾಗ ಯಾರೊಬ್ಬರ ಬಳಿಯೂ ಚರ್ಚೆ ಮಾಡಲಿಲ್ಲ. ದೆಹಲಿ ನಾಯಕರು ಬಂದು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕಾಗಿ ನಮ್ಮ ಜತೆ ಮೈತ್ರಿ ಮಾಡಿಕೊಂಡರು. ನಮಗೇನು ಸರ್ಕಾರ ರಚನೆ ಮಾಡಬೇಕೆಂಬ ಇಚ್ಛೆ ಇರಲಿಲ್ಲ ಎಂದು ಗೌಡರು ಅಸಮಾಧಾನ ಹೊರ ಹಾಕಿದರು.

ಜೆಡಿಎಸ್ ಜತೆ ಮೈತ್ರಿ ಮುಂದುವರೆದರೆ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಶಕ್ತಿ ಕುಂದುತ್ತದೆ ಎಂಬ ಸಂಕಟ ಕೆಲವರಲ್ಲಿ ಇದೆ. ಸರ್ಕಾರ ಸುಭದ್ರವಾಗಿರಲಿ ಎಂಬ ಕಾರಣಕ್ಕೆ ನಮಗೆ ಸಿಗಬೇಕಾದ ಒಂದು ಮಂತ್ರಿ ಸ್ಥಾನವನ್ನು ಕಾಂಗ್ರೆಸ್‍ನವರು ತೆಗೆದುಕೊಂಡಿದ್ದಾರೆ.

ಮೂರನೇ ಒಂದು ನಿಯಮವೂ ಕೂಡ ಪಾಲನೆಯಾಗುತ್ತಿಲ್ಲ. ಆದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದೇನೆ. ಈವರೆಗೂ ಸರ್ಕಾರದ ಬಗ್ಗೆ ನಾವು ಒಂದೇ ಒಂದು ಮಾತನ್ನು ಕೂಡ ಆಡಿಲ್ಲ ಎಂದು ನೋವಿನಿಂದಲೇ ಹೇಳಿದರು.

ಕಾಂಗ್ರೆಸ್‍ನವರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗ ಬಾರದಿತ್ತು. ಅದಕ್ಕಾಗಿಯೇ ನಮ್ಮ ಬಳಿ ಓಡಿ ಬಂದು ಸರ್ಕಾರ ರಚನೆ ಮಾಡಲು ಮುಂದಾದರು. ನಾನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿದ್ದೆ ಎಂದು ಹೇಳಿದ್ದೆ. ಆದರೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿ ಎಂದು ಅವರು ಮನವಿ ಮಾಡಿಕೊಂಡರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಲು ಜೆಡಿಎಸ್ ಹೇಗೆ ಕಾರಣವಾಯಿತು ಎಂಬುದು ತಿಳಿಯುತ್ತಿಲ್ಲ. ಹಾಗೇನಾದರೂ ಇದ್ದರೆ ಅದನ್ನು ಬಹಿರಂಗವಾಗಿ ಹೇಳಬಹುದು. ನಿಮ್ಮ ಸಂಘಟನೆಗೆ ನಾವು ಎಲ್ಲಿಯೂ ಅಡ್ಡಿಪಡಿಸುತ್ತಿಲ್ಲ. ಆದರೂ ಇಂತಹ ಅನುಮಾನ ಏಕೆ ಮೂಡಿದೆ ಎಂದು ಆಕ್ರೋಶ ಹೊರ ಹಾಕಿದರು.


ಇಲ್ಲಿಯವರೆಗೂ ಮೈತ್ರಿ ಧರ್ಮದ ಪಾಲನೆಯನ್ನು ಮೀರದೆ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೇವೆ. ತುಮಕೂರು ಕ್ಷೇತ್ರವನ್ನು ನಾವು ಕೇಳಿಯೇ ಇರಲಿಲ್ಲ. ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನು ಕೇಳಿಕೊಂಡಿದ್ದೆ ಎಂದು ಹೇಳಿದರು.

ಮೈಸೂರಿಗೋಸ್ಕರ ತುಮಕೂರು ಕ್ಷೇತ್ರವನ್ನು ಬಿಟ್ಟು ಕೊಟ್ಟರು. ಈಗ ಫಲಿತಾಂಶ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಸೋತ ನಂತರ ಇದರ ಬಗ್ಗೆ ಚರ್ಚೆ ಅಗತ್ಯವಿಲ್ಲ. ರಾಜಕಾರಣದಲ್ಲಿ ಅನೇಕ ಏಳು ಬೀಳುಗಳು ಇರುತ್ತವೆ. ನನ್ನ ಜತೆಯಲ್ಲೇ ಇದ್ದು ಜತೆಯಲ್ಲೇ ಬೆಳೆದು ನನ್ನನ್ನು ಬಿಟ್ಟು ಹೋಗಿದ್ದಾರೆ. ಆದರೂ ಧೃತಿಗೆಡದ ನಾನು ಮುಂದೆ ಬಂದಿದ್ದೇನೆ. ಇವೆಲ್ಲವೂ ಸರ್ವೇ ಸಾಮಾನ್ಯ ಎಂದು ಅಭಿಪ್ರಾಯಪಟ್ಟರು.

Facebook Comments

Sri Raghav

Admin