ಪ್ರವಾಹ ಪೀಡಿತ ಅಸ್ಸಾಂಗೆ ಗರಿಷ್ಠ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ದೇವೇಗೌಡರ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.17-ಪ್ರವಾಹ ಪೀಡಿತ ಅಸ್ಸಾಂ ರಾಜ್ಯಕ್ಕೆ ಗರಿಷ್ಠ ನೆರವು ನೀಡುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅಸ್ಸಾಂನ ಪ್ರವಾಹದ ಬಗ್ಗೆ ತುರ್ತು ಗಮನ ಹರಿಸುವಂತೆ ಪ್ರಧಾನ ಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ. ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಸಾಕಷ್ಟು ಹಾನಿಯುಂಟಾಗಿದ್ದು, ತಮಗೆ ತುಂಬಾ ನೋವು ಉಂಟಾಗಿದೆ ಎಂದಿದ್ದಾರೆ‌.

ದೇಶದಲ್ಲಿ ವ್ಯಾಪಿಸಿರುವ ಕೋವಿಡ್-19ರ ಸಾಂಕ್ರಾಮಿಕ ರೋಗದ ಜತೆಗೆ ಅಸ್ಸಾಂ ಜನರು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿರುವುದು ದುರಾದೃಷ್ಟಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಪ್ರವಾಹದಿಂದಾಗಿ ಅಸ್ಸಾಂ ಪರಿಸ್ಥಿತಿಯು ಹದಗೆಟ್ಟಿದೆ. ಇತ್ತೀಚಿನ ವರದಿಗಳ ಪ್ರಕಾರ ಸುಮಾರು 60 ಕ್ಕಿಂತಲೂ ಹೆಚ್ಚು ಜನರು ಮರಣಹೊಂದಿದ್ದಾರೆ. ಸುಮಾರು ನಾಲ್ಕು ಮಿಲಿಯನ್ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪ್ರವಾಹ ಸಂತ್ರಸ್ಥರಿಗಾಗಿ ಸುಮಾರು 480 ಪರಿಹಾರ ಶಿಬಿರಗಳನ್ನು ಈಗಾಗಲೇ ತೆರೆಯಲಾಗಿದೆ. ಸಾರ್ವಜನಿಕ ಆಸ್ತಿಗೂ ದೊಡ್ಡ ಪ್ರಮಾಣದ ಹಾನಿಯುಂಟಾಗಿದೆ.

ಕಝಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ 60 ಕ್ಕಿಂತಲೂ ಹೆಚ್ಚು ಪ್ರಾಣಿಗಳ ಸಾವು ಸಂಭವಿಸಿರುವುದು ದುಃಖವನ್ನುಂಟು ಮಾಡಿದೆ ಎಂದಿದ್ದಾರೆ‌.

ತಾವು ಪ್ರಧಾನಿಯಾಗಿದ್ದಾಗ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಜನರು ಸಾಕಷ್ಟು ಪ್ರೀತಿ ವಿಶ್ವಾಸವನ್ನು ತೋರಿಸಿದರು. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ನಂತರ ಆ ರಾಜ್ಯಕ್ಕೆ ಭೇಟಿ ನೀಡುವುದಾಗಿ ಅವರು ಹೇಳಿದ್ದಾರೆ.

Facebook Comments

Sri Raghav

Admin