ಅಯ್ಯೋ ವಿಧಿಯೇ.. ಸಾವು ಹೀಗೂ ಬರುತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಸಾವು ಯಾವಾಗ, ಯಾವ ರೂಪದಲ್ಲಿ ಬರುತ್ತೆ ಎಂದು ಊಹಿಸಿಕೊಳ್ಳುವುದೂ ಕಷ್ಟ. ತನ್ನಷ್ಟಕ್ಕೆ ತಾನು ಸ್ನೇಹಿತನೊಂದಿಗೆ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಾಜಿ ಸೈನಿಕರೊಬ್ಬರ ಮೇಲೆರಗಿದ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಈ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಡ್ಯ ನಿವಾಸಿ, ನಿವೃತ್ತ ಯೋಧ ಆರ್.ಎಲ್.ಪಟೇಲ್ ಸ್ನೇಹಿತರೊಡನೆ ಸಕಲೇಶಪುರ ಪಟ್ಟಣಕ್ಕೆ ಬಂದಿದ್ದರು. ಅಲ್ಲೇ ಸಮೀಪವಿದ್ದ ಅಂಗಡಿಯೊಂದರಲ್ಲಿ ಕಾಫಿಪುಡಿ ಖರೀದಿಸಿ ರಸ್ತೆಬದಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಆ ಮಾರ್ಗದಲ್ಲೇ ಮರದ ಮೇಲೆ ಕುಳಿತ್ತಿದ್ದ ಜವರಾಯ ಅವರ ಪ್ರಾಣವನ್ನೇ ತೆಗೆದಿದ್ದಾನೆ

ಸಕಲೇಶಪುರ ಪಟ್ಟಣದ ಶ್ರೀಗಂಧ ಹೋಟೆಲ್ ಮುಂಭಾಗ ಆರ್.ಎಲ್.ಪಟೇಲ್ ಮತ್ತು ಸ್ನೇಹಿತ​ ಒಟ್ಟಿಗೆ ಬರುತ್ತಿದ್ದಂತೆ ಅವರ ಮೇಲೆ ಮರದ ಕೊಂಬೆ ಮುರಿದು ಬಿದ್ದಿದ್ದು, ಸ್ನೇಹಿತ ಕೂಡಲೇ ಮೇಲೆದ್ದರೂ ಮಾಜಿ ಸೈನಿಕ ಮಾತ್ರ ಎಚ್ಚರಗೊಳ್ಳಲಿಲ್ಲ.

ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪಟೇಲ್​ರನ್ನು ಸ್ಥಳೀಯರು ಆಂಬುಲೆನ್ಸ್ ಮುಖಾಂತರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಿದರಾದರೂ ಬದುಕಲಿಲ್ಲ. ಮೃತರಿಗೆ 35 ವರ್ಷ ವಯಸ್ಸಾಗಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments