ಮಹತ್ವದ ಮಾಹಿತಿ : ಸಾಲಮನ್ನಾಗಾಗಿ ರೈತರು ಈ ದಾಖಲೆಗಳನ್ನು ನೀಡಲೇಬೇಕು.!

ಈ ಸುದ್ದಿಯನ್ನು ಶೇರ್ ಮಾಡಿ

Formers--01

ಬೆಂಗಳೂರು. ಡಿ. 12 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಲ ಮನ್ನಾ ಯೋಜನೆ ಅನುಷ್ಠಾನ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಸಹಕಾರ ಬ್ಯಾಂಕ್‍ಗಳ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ರೈತರ ದಾಖಲೆ ಸಂಗ್ರಹ ಮತ್ತು ಅಪಲೋಡ್ ಕಾರ್ಯಕ್ಕೆ ಚಾಲನೆ ದೊರೆತಿದೆ.  ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಸಹಕಾರಿ ಬ್ಯಾಂಕ್‍ಗಳ ಸಾಲದ ಬಗ್ಗೆ ರೈತೆ ದಾಖಲಾತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಡಿ. 13 ರಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಪ್ರತಿಯೊಬ್ಬ ಅರ್ಹ ಫಲಾನುಭವಿಗಳ ವಿವರ ಗಣಕೀಕರಣ ಮತ್ತು ರೈತರ ಸ್ವಯಂ ಘೋಷಣಾ ಪತ್ರ ಪಡೆಯುವ ಕಾರ್ಯ ಪ್ರಾರಂಭವಾಗಲಿದೆ.

ಡಿ. 13 ರಿಂದ 30 ರ ಒಳಗೆ ಈ ಕೆಲಸ ಮುಗಿಸುವಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಸರ್ವೆ ಸೆಟಲ್‍ಮೆಂಟ್ ವಿಭಾಗದ ಆಯುಕ್ತರಾದ ಮನಿಶ್ ಮುದ್ಗಲ್ ಅವರು ನಿರ್ದೇಶನ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಸಹಕಾರಿ ಸಂಘಗಳ, ಉಪನಿಬಂಧಕರು, ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ವಾಣಿಜ್ಯ ಬ್ಯಾಂಕ್‍ಗಳ ಹಿರಿಯ ಅಧಿಕಾರಿಗಳೊಂದಿಗೆ ಡಿ. 12 ರಂದು ವಿಡಿಯೋ ಸಂವಾದ ನಡೆಸಿದ ಅವರು ಈ ಮಾಸಾಂತ್ಯದೊಳಗೆ ಎಲ್ಲಾ ಅರ್ಹ ರೈತರ ದಾಖಲೆಗಳು ಮತ್ತು ಸ್ವಯಂ ಘೋಷಣಾ ಪತ್ರಗಳನ್ನು ಗಣಕೀಕರಣಗೊಳಿಸುವಂತೆ ನಿರ್ದೇಶನ ನೀಡಿದರು.

ಸಾಲ ಮನ್ನಾ ಲಾಭ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲಪಡೆದಿರುವ ರೈತರು ತಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಜೆರಾಕ್ಸ್ ಪ್ರತಿ ಹಾಗೂ ಜಮೀನಿನ ಸರ್ವೆ ನಂ. ವಿವರವನ್ನು ಸಲ್ಲಿಸಬೇಕು (ಆರ್.ಟಿ.ಸಿ. ಅಗತ್ಯವಿರುವುದಿಲ್ಲ) ಹಾಗೂ ಬ್ಯಾಂಕ್‍ನಲ್ಲಿ ನೀಡುವ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಮಾಡಬೇಕು.

ರಾಷ್ಟ್ರೀಕೃತ ಬ್ಯಾಂಕ್‍ಗಳು ಡಿ. 13 ರಿಂದ ಪ್ರತಿದಿನ 50-100 ರೈತರ ವಿವರಗಳನ್ನು ಗಣಕೀಕರಣಗೊಳಿಸಿ ಅಪ್‍ಲೋಡ್ ಮಾಡಬೇಕು. ಹೆಚ್ಚಿನ ಸಂಖ್ಯೆಯ ಸಾಲ ಖಾತೆಗಳನ್ನು ಹೊಂದಿರುವ ಬ್ಯಾಂಕ್‍ಗಳು ವ್ಯವಸ್ಥಿತವಾಗಿ ರೈತರಿಗೆ ತಿಳುವಳಿಕೆ ನೀಡಿ ದಿನವಹಿ ಟೋಕನ್‍ಗಳನ್ನು ಮುಂಚಿತವಾಗಿ ನೀಡಿ ಆದಷ್ಟು ಶೀಘ್ರವಾಗಿ ಮತ್ತು ನಿಖರವಾಗಿ ಮಾಹಿತಿ ಅಪ್‍ಲೋಡ್ ಮಾಡುವಂತೆ ಸೂಚಿಸಿದರು.

ದಾಖಲೆಗಳನ್ನು ನಿಖರವಾಗಿ ಅಪ್‍ಲೋಡ್ ಮಾಡಬೇಕು ಅನುಮಾನಗಳಿರುವ ಅಥವಾ ವ್ಯತ್ಯಾಸವೆನಿಸುವ ಪ್ರಕರಣಗಳನ್ನು ತಹಶೀಲ್ದಾರರ ನೇತೃತ್ವದ ತಾಲ್ಲೂಕು ಸಮಿತಿ ಗಮನಕ್ಕೆ ವರ್ಗಾಯಿಸಬೇಕು ಎಂದು ಮುನಿಶ್ ಮುದ್ಗಲ್ ಹೇಳಿದರು. ಸಹಕಾರ ಬ್ಯಾಂಕ್‍ಗಳಲ್ಲಿ ನ. 30 ರವರೆಗೆ ಇದ್ದು ಸಾಲ ಬಾಕಿ ಪಾವತಿಗೆ 800 ಕೋಟಿ ರೂಪಾಯಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬಾಕಿ ಇರುವ ಜಿಲ್ಲೆಗಳಲ್ಲಿ ದಾಖಲೆಗಳ ಅಪಲೋಡ್ ಕಾರ್ಯವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸುವಂತೆ ಅವರು ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin