ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ಅನ್ನದಾತರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.25- ಅನ್ನದಾತರ ಆಕ್ರೋಶ ಬುಗಿಲೆದ್ದಿದೆ. ಎಪಿಎಂಸಿ, ಭೂ ಸುಧಾರಣೆ ಸೇರಿದಂತೆ ಹಲವು ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರೈತರು, ಕಾರ್ಮಿಕರು, ಕನ್ನಡಪರ ಹಾಗೂ ದಲಿತ ಸಂಘಟನೆಗಳ ಕಾರ್ಯಕತರು ಇಂದು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ಕೃಷಿ ಕಾಯ್ದೆ ತಿದ್ದುಪಡಿಗಳು ಮಾಲೀಕರು ಮತ್ತು ಬಂಡವಾಳ ಶಾಹಿಗಳ ಪರವಾಗಿವೆ. ರೈತರ ಪಾಲಿಗೆ ಕಂಟಕವಾಗಿದೆ ಎಂದು ರೈತ ಸಂಘಟನೆಗಳು ವಿವಿಧ ಹೆದ್ದಾರಿಗಳಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.
ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ ಮುಂತಾದೆಡೆ, ರೈತರು, ಕಾರ್ಮಿಕರು, ದಲಿತರು, ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ 35ಕ್ಕೂ ಹೆಚ್ಚು ಸಂಘಟನೆಗಳು ರಸ್ತೆ ತಡೆ, ಜೈಲ್‍ಬರೋ ನಡೆಸಿದವು.

ಹಲವೆಡೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ರಾಜಧಾನಿ ಬೆಂಗಳೂರಿನ ಗೊರಗುಂಟೆಪಾಳ್ಯ, ನಾಯಂಡಹಳ್ಳಿ ಹೆದ್ದಾರಿ ಬಳಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ರಸ್ತೆ ತಡೆ ನಡೆಸಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಬೆಳ್ಳಂಬೆಳಗ್ಗೆ ಅರ್ಧಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಪರಿಣಾಮ ಈ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನಾನಿರತ ಸುಮಾರು 50 ರೈತರನ್ನು ಪೆÇಲೀಸರು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಮುಖಂಡ ಗಿರೀಶ್‍ಗೌಡ ಸರ್ಕಾರದ ವಿರುದ್ಧ ಕಿಡಿಕಾರಿ ರೈತರ ಕೊರಳಿಗೆ ಉರುಳಾಗಿರುವ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಇತ್ತ ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತರು, ಕೃಷಿ ಕಾರ್ಮಿಕರ ಜತೆ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಹಲವಾರು ರೈತರನ್ನು ಪೊಲೀಸರು ವಶಕ್ಕೆ ಪಡೆದರು. ನಗರದ ಮೌರ್ಯ ವೃತ್ತ, ಫ್ರೀಡಂ ಪಾರ್ಕ್ ಬಳಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹೆಬ್ಬಾಳ ರಸ್ತೆ ತಡೆ ನಡೆಸಲು ಆಗಮಿಸುತ್ತಿದ್ದ ರೈತರನ್ನು ದೇವನಹಳ್ಳಿ ಬಳಿಯೇ ಪೊಲೀಸರು ವಶಕ್ಕೆ ಪಡೆದರು. ಮೈಸೂರು, ದಾವಣಗೆರೆ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ, ಕಲ್ಬುರ್ಗಿ ಸೇರಿದಂತೆ ರಾಜ್ಯದ ವಿವಿಧೆಡೆ ರೈತರು ರಾಜ್ಯ , ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕೆಲವೆಡೆ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬಂಡವಾಳಶಾಹಿ ಸರ್ಕಾರದ ವಿರುದ್ಧ ರೈತರು ಬಂಡೆದಿದ್ದಾರೆ. ಈ ಕಾರ್ಪೊರೇಟ್ ಸರ್ಕಾರವನ್ನು ಸಹಿಸಲು ಸಾಧ್ಯವಿಲ್ಲ. ಮಸೂದೆ ಜಾರಿಗೊಳಿಸುವ ಬಗ್ಗೆ ರೈತರ ಸಲಹೆ ಪಡೆದಿಕೊಂಡಿಲ್ಲ. ಎಪಿಎಂಸಿ ಮಸೂದೆ ರೈತರ ಮರಣ ಶಾಸನವಾಗಿದೆ.

ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂಪ್ಪನವರ ಬಣ್ಣ ಬಯಲಾಗಿದೆ ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ-ಕೇಂದ್ರ ಸರ್ಕಾರಗಳ ರೈತ ವಿರೋ ಧೋರಣೆ ಖಂಡಿಸಿ ಇಂದು ರಸ್ತೆ ತಡೆ ನಡೆಸುತ್ತಿದ್ದೇವೆ.

28ರಂದು ರಾಜ್ಯ ಬಂದ್ ನಡೆಸುವ ಮೂಲಕ ರೈತರ ಸಾಮಥ್ರ್ಯ ಏನು ಎಂಬುದನ್ನು ತೋರಿಸುತ್ತೇವೆ. 34ಕ್ಕೂ ಹೆಚ್ಚು ಸಂಘಟನೆಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿವೆ ಎಂದು ಹೇಳಿದರು.

ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಹೊಸೂರು ರಸ್ತೆಯ ಟೋಲ್‍ಗೇಟ್ ಬಳಿ ರಸ್ತೆ ತಡೆ ನಡೆಸಿದರು. ರೈತಪರ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇದೆ. ಸರ್ಕಾರದ ರೈತ ವಿರೋ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದರು.

ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕುಮಾರ್ ನೇತೃತ್ವದಲ್ಲಿ ನೈಸ್ ರಸ್ತೆ ಬಳಿ ಪ್ರತಿಭಟನೆ ನಡೆಸಲಾಯಿತು. ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.

Facebook Comments

Sri Raghav

Admin