ರೈತರ ಪ್ರತಿಭಟನೆ, ಬೆಂಗಳೂರಿಗರಿಗೆ ತಟ್ಟಿದ ಟ್ರಾಫಿಕ್ ಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.25-ಎಪಿಎಂಸಿ ಭೂ ಸುಧಾರಣೆ ಕಾಯ್ದೆ ವಿರೋಸಿ ರಾಷ್ಟ್ರೀಯ ಕಿಸಾನ್ ಮಹಾಸಂಘ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ 35 ಸಂಘಟನೆಗಳು ಇಂದು ರಾಜ್ಯದ ಹಲವೆಡೆ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದವು. ಪ್ರತಿಭಟನಾ ನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ಬೆಂಗಳೂರಿನ ಗೊರಗುಂಟೆಪಾಳ್ಯ ವೃತ್ತದಲ್ಲಿ ರೈತ ಸಂಘದ ವತಿಯಿಂದ ಗಿರೀಶ್‍ಗೌಡ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದ್ದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಬೆಂಗಳೂರು, ತುಮಕೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಕಿಲೋ ಮೀಟರ್‍ಗಟ್ಟಲೆ ನಿಂತಿದ್ದವು. 20 ನಿಮಿಷಗಳ ಕಾಲ ನೂರಾರು ರೈತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್‍ಗೌಡ ಅವರು, ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ. ದೇಶಾದ್ಯಂತ ಕೇಂದ್ರ ಸರ್ಕಾರದ ರೈತ ವಿರೋ ಧೋರಣೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ.

ಅದನ್ನು ಬೆಂಬಲಿಸಿ ನಾವು ಕೂಡ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಈಗಲಾದರೂ ಎಚ್ಚೆತ್ತು ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪ್ರತಿಭಟನೆಗಳನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ.

28ರಂದು ಕರ್ನಾಟಕ ಬಂದ್‍ಗೆ ಕರೆಕೊಟ್ಟಿದ್ದು ಐತಿಹಾಸಿಕ ಬಂದ್ ಮಾಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸುತ್ತೇವೆಂದು ಹೇಳಿದರು. ರೈತರ ಪರ ಎಂದು ಹೇಳಿಕೊಳ್ಳುವ ಸರ್ಕಾರಗಳು ರೈತ ವಿರೋ ಶಾಸನಗಳನ್ನು ಜಾರಿಗೊಳಿಸುತ್ತಿವೆ. ಅನಿವಾರ್ಯವಾಗಿ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಅತ್ತಿಬೆಲೆ ಟೋಲ್ ಸಮೀಪ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ರೈತ ವಿರೋ ಸರ್ಕಾರದ ನೀತಿಗಳನ್ನು ಖಂಡಿಸುತ್ತೇವೆ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಕೃಷಿ ಸಮುದಾಯಕ್ಕೆ ಪೂರಕವಾಗಿ ಸರ್ಕಾರ ನಡೆದುಕೊಳ್ಳಬೇಕು ಎಂದು ಗೋವಿಂದ್ ಈ ಸಂದರ್ಭದಲ್ಲಿ ಹೇಳಿದರು.

ವಿವಾದಾತ್ಮಕ ಕೃಷಿ ಮಸೂದೆ ವಿರೋಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಈಗಾಗಲೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬೆಂಗಳೂರಿನ ಮೌರ್ಯ ವೃತ್ತ, ಪ್ರೀಡಂ ಪಾರ್ಕ್, ಮೈಸೂರು ರಸ್ತೆ ಬಳಿ ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಕ್ಕಾರ ಕೂಗಿದ್ದಾರೆ.

ಅನ್ನದಾತನ ಆಕ್ರೋಶ ಮೈಸೂರಿನಲ್ಲಿಯೂ ಭುಗಿಲೆದ್ದಿದ್ದು, ಸಾಂಸ್ಕೃತಿಕ ನಗರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿ ಹೋರಾಟ ನಡೆಸುತ್ತಿದ್ದಾರೆ.

ಹೆಬ್ಬಾಳ ಬಳಿ ಪ್ರತಿಭಟನೆ ನಡೆಸಲು ಆಗಮಿಸುತ್ತಿದ್ದ ನೂರಾರು ರೈತರನ್ನು ದೇವನಹಳ್ಳಿ ಸಮೀಪ ಪೊಲೀಸರು ವಶಕ್ಕೆ ಪಡೆದರು. ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಚುರುಕುಗೊಂಡಿದ್ದು ಹೆದ್ದಾರಿ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin