ಹಲವು ಶಾಸಕರ ರಾಜೀನಾಮೆ ಬೆದರಿಕೆ ನಡುವೆಯೂ ಬಳ್ಳಾರಿ ಜಿಲ್ಲೆ ವಿಭಜನೆ ಪ್ರಕ್ರಿಯೆ ಆರಂಭ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.28- ಹಲವು ಶಾಸಕರ ರಾಜೀನಾಮೆ ಬೆದರಿಕೆ ನಡುವೆಯೂ ಗಡಿ ಜಿಲ್ಲೆ ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಬಳ್ಳಾರಿ ಜಿಲ್ಲಾಧಿಕಾರಿಗೆ ಪತ್ರ ಬರೆದು, ಜಿಲ್ಲೆಯ ವಿಭಜನೆ ಪ್ರಕ್ರಿಯೆ ಕುರಿತಂತೆ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ.

ಅ.3ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಾಗಿಸುವ ಆದೇಶ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಬಳ್ಳಾರಿಯ ಐದು ತಾಲ್ಲೂಕುಗಳನ್ನು( ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ , ಹೂವಿನಹಡಗಲಿ, ವಿಜಯನಗರ ಮತ್ತು ಕಂಪ್ಲಿ) ಒಳಗೊಂಡ ನೂತನ ಜಿಲ್ಲೆ ಅಂದು ಅಸ್ತಿತ್ವಕ್ಕೆ ಬರಲಿದ್ದು, ಈ ಮೂಲಕ ವಿಜಯನಗರ ರಾಜ್ಯದ 31 ಜಿಲ್ಲೆಯಾಗಿ ಘೋಷಣೆಯಾಗಲಿದೆ.

ಎರಡು ದಿನಗಳ ಹಿಂದೆಯೇ ಮಂಜುನಾಥ್ ಪ್ರಸಾದ್ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ಕೊಟ್ಟಿದ್ದಾರೆ. ಬಳ್ಳಾರಿಯಿಂದ ನೂತನ ಜಿಲ್ಲೆಗೆ ಯಾವ ಯಾವ ತಾಲ್ಲೂಕುಗಳನ್ನು ಸೇರ್ಪಡೆ ಮಾಡಬಹುದು. ವಿಜಯನಗರ ಜಿಲ್ಲಾ ಕೇಂದ್ರದಿಂದ ಇತರೆ ತಾಲ್ಲೂಕುಗಳಿಗೆ ಇರುವ ಅಂತರ, ಸೌಲಭ್ಯಗಳು, ನೂತನ ಜಿಲ್ಲೆಗೆ ಬೇಕಾದ ಮೂಲಭೂತ ಸೌಕರ್ಯ ಸೇರಿದಂತೆ ಮತ್ತಿತರ ಪ್ರಸ್ತಾವನೆಯ ಬಗ್ಗೆ ಸುದೀರ್ಘ ವರದಿ ನೀಡುವಂತೆ ಸೂಚನೆ ಕೊಟ್ಟಿದ್ದಾರೆ.

ಈಗಾಗಲೇ ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅಜೆಂಡಾ(ಕಾರ್ಯಸೂಚಿ) ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ವಿಜಯನಗರವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಹಲವು ದಿನಗಳಿಂದ ಹೋರಾಟ ಮಾಡುತ್ತಿರುವುದು ಮತ್ತು ಬಳ್ಳಾರಿಗೆ ಕೆಲವು ತಾಲ್ಲೂಕುಗಳು ಅತಿ ದೂರದಲ್ಲಿರುವ ಕಾರಣ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.

ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ತಾಲ್ಲೂಕುಗಳು ಜಿಲ್ಲೆಯಿಂದ 150, 120, 100 ಕಿ.ಮೀ ಅಂತರದಲ್ಲಿದೆ. ವಿಜಯನಗರವನ್ನು ಕೇಂದ್ರವಾಗಿಟ್ಟುಕೊಂಡು ಜಿಲ್ಲೆ ಮಾಡಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿತ್ತು. ಅಲ್ಲದೆ ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ತನ್ನದೇ ಆದ ಇತಿಹಾಸ ಮತ್ತು ಭವ್ಯ ಪರಂಪರೆಯಿದೆ. ಮುಂದಿನ ಪೀಳಿಗೆಗೆ ಈ ಅರಸರ ಸಾಧನೆಗಳು,ರಾಜ್ಯಕ್ಕೆ ಕೊಟ್ಟ ಕೊಡುಗೆಗಳು ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಉಳಿಯಲು ವಿಜಯನಗರವನ್ನು ಜಿಲ್ಲೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತು.

ಕಳೆದವಾರವಷ್ಟೇ ಮಾಜಿ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿಜಯನಗರವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಮನವಿ ಮಾಡಿದ್ದರು. ಆದರೆ ಬಿಜೆಪಿಯಲ್ಲಿ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ.

ಸಚಿವ ಶ್ರೀರಾಮುಲು, ಶಾಸಕ ಜಿ.ಸೋಮಶೇಖರ್ ರೆಡ್ಡಿ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ಹಂತದಲ್ಲಿ ಸೋಮಶೇಖರ್ ರೆಡ್ಡಿ ಅವರು ಬಳ್ಳಾರಿಯನ್ನು ವಿಭಾಗಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನು ಹಾಕಿದ್ದಾರೆ.  ಆದರೆ ಇದಕ್ಕೆ ಕ್ಯಾರೆ ಎನ್ನದ ಸರ್ಕಾರ ಬಳ್ಳಾರಿಯನ್ನು ವಿಭಾಗಿಸುವ ಪ್ರಸ್ತಾವನೆಗೆ ಈಗಾಗಲೇ ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದೆ.

Facebook Comments

Sri Raghav

Admin