ಇಂದು ಮತ್ತೆ 4 ಉಗ್ರರು ಖತಂ, 24 ಗಂಟೆಗಳಲ್ಲಿ 9 ಭಯೋತ್ಪಾದಕರ ಹುಟ್ಟಡಗಿಸಿದ ಸೇನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜೂ.8-ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇನ್ನೂ ನಾಲ್ವರು ಭಯೋತ್ಪಾದಕರನ್ನು ಹೊಡೆದುರಳಿಸಿದೆ. ಇದರೊಂದಿಗೆ ಕಳೆದ 24 ತಾಸುಗಳಲ್ಲಿ ಒಟ್ಟು ಒಂಭತ್ತು ಉಗ್ರಗಾಮಿಗಳನ್ನು ಹೊಸಕಿ ಹಾಕಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಮಾರ್ಚ್‍ನಿಂದ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಉಪಟಳ ತೀವ್ರಗೊಂಡಿದ್ದು, ಅವರನ್ನು ಸದೆಬಡಿಯುವ ಕಾಯಾಚರಣೆಯನ್ನು ಯೋಧರು ಮತ್ತು ಪೊಲೀಸರು ತೀವ್ರಗೊಳಿಸಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಇಂದು ಬೆಳಗ್ಗೆ ನಡೆದ ಎನ್‍ಕೌಂಟರ್‍ನಲ್ಲಿ ಇನ್ನೂ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಫಿಯಾನ್ ಜಿಲ್ಲೆಯ ಪಿಜ್‍ಜೋರಾ ಪ್ರದೇಶದಲ್ಲಿ ಉಗ್ರರು ಅವಿತಿಟ್ಟುಕೊಂಡು ವಿಧ್ವಂಸಕ ಕೃತ್ಯಗಳಿಗೆ ಸಜ್ಜಾಗಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆ ಭದ್ರತಾ ಪಡೆಗಳು ನಿನ್ನೆ ಮಧ್ಯರಾತ್ರಿಯಿಂದ ಆ ಸ್ಥಳವನ್ನು ಸುತ್ತುವರಿದು ಆತಂಕವಾದಿಗಳಿಗೆ ಶೋಧ ನಡೆಸುತ್ತಿತ್ತು.

ಈ ಸಂದರ್ಭದಲ್ಲಿ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು. ಈ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಹತರಾದ ಉಗ್ರಗಾಮಿಗಳಿಂದ ಎಕೆ-47, ಎಕೆ-56 ರೈಫಲ್‍ಗಳು, ಪಿಸ್ತೂಲ್‍ಗಳು, ಹ್ಯಾಂಡ್ ಗ್ರೆನೇಡ್‍ಗಳು ಮತ್ತು ಬುಲೆಟ್‍ಗಳಿರುವ ಮ್ಯಾಗಝೈನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶೋಪಿಯಾನ್ ಜಿಲ್ಲೆಯಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ನಡೆದ ಎರಡನೇ ಉಗ್ರ ನಿಗ್ರಹ ಕಾರ್ಯಾಚರಣೆ ಇದಾಗಿದ್ದು, ಒಟ್ಟು ಒಂಭತ್ತು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

ನಿನ್ನೆ ಬೆಳಗ್ಗೆ ಶೋಪಿಯಾನ್ ಜಿಲ್ಲೆಯ ರೆಬಲ್ ಪ್ರದೇಶದಲ್ಲಿ ನಡೆದ ಸುದೀರ್ಘ ಗುಂಡಿನ ಚಕಮಕಿಯಲ್ಲಿ ಸ್ವಯಂಘೋಷಿತ ಕಮಾಂಡರ್ ಸೇರಿದಂತೆ ಹಿಜ್‍ಬುಲ್ ಮುಜಾಹಿದ್ಧೀನ್ ಉಗ್ರಗಾಮಿ ಸಂಘಟನೆಯನ್ನು ಐವರು ಆತಂಕವಾದಿ ಯೋಧರು ಹೊಡೆದುರುಳಿಸಿದ್ದರು.

Facebook Comments