ನಕಲಿ ಅಂಕಪಟ್ಟಿ ನೀಡಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ
ಬೆಂಗಳೂರು, ಡಿ.11- ಪ್ರತಿಷ್ಠಿತ ವಿವಿಧ ಓಪನ್ ಯೂನಿವರ್ಸಿಟಿಗಳಿಗೆ ಸಂಬಂಧಿಸಿದ ಅಂಕಪಟ್ಟಿಗಳನ್ನು ನಕಲಿಯಾಗಿ ತಯಾರಿಸಿ ಅಸಲಿ ಎಂದು ವಿದ್ಯಾರ್ಥಿಗಳನ್ನು ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಇನ್ಸ್ಟಿಟ್ಯೂಟ್ವೊಂದರ ಮಾಲೀಕನನ್ನು ಸಿಸಿಬಿ ಪೊಲೀಸರು ಬಂಧಿಸಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಡಾ.ರಾಜ್ಕುಮಾರ್ ರಸ್ತೆಯ ಇ ಬ್ಲಾಕ್ನಲ್ಲಿರುವ ಬ್ರಿಗೇಡ್ ಗೇಟ್ವೇ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಶ್ರೀನಿವಾಸರೆಡ್ಡಿ (42) ಬಂಧಿತ ವಂಚಕ.
ಮೂಲತಃ ಆಂಧ್ರ ಪ್ರದೇಶದ ಶ್ರೀನಿವಾಸ ರೆಡ್ಡಿ ಈ ಮೊದಲು ನವದೆಹಲಿಯಲ್ಲಿ ವಾಸವಾಗಿದ್ದು, 2004ರಲ್ಲಿ ಬೆಂಗ ಳೂರಿಗೆ ಬಂದು ಈ ದಂಧೆಯಲ್ಲಿ ತೊಡಗಿಸಿ ಕೊಂಡಿದ್ದುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನೊಂದಿಗೆ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ತಿಳಿಸಿದ್ದಾರೆ.
ಈತ ಇದುವರೆಗೂ ಓಪನ್ ಯೂನಿ ವರ್ಸಿಟಿಯ ಅಂಕಪಟ್ಟಿಗಳನ್ನು ನಕಲು ಮಾಡಿದ್ದು, ಕರ್ನಾಟಕದ ಯಾವುದೇ ಯೂನಿವರ್ಸಿಟಿಯ ಅಂಕಪಟ್ಟಿಯನ್ನು ನಕಲು ಮಾಡಿಲ್ಲ. ತನ್ನ ವಂಚನೆಗೆ ಓಪನ್ ಯೂನಿವರ್ಸಿಟಿ ಗಳನ್ನೇ ಬಳಸಿಕೊಂಡಿದ್ದುದು ತನಿಖೆಯಿಂದ ದೃಢಪಟ್ಟಿದೆ ಎಂದು ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದರು. ಮಹಾಲಕ್ಷ್ಮಿಪುರಂ ಠಾಣೆ ವ್ಯಾಪ್ತಿಯಲ್ಲಿನ ವಿಎಸ್ಎಸ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಶ್ರೀ ವೆಂಕಟೇಶ್ವರ ಇಂಟರ್ನ್ಯಾಷನಲ್ ಎಜುಕೇಷನಲ್ ಸೊಸೈಟಿ ಎಂಬ ಇನ್ಸ್ಟಿಟ್ಯೂಟ್ಅನ್ನು ಶ್ರೀನಿವಾಸರೆಡ್ಡಿ ನಡೆಸುತ್ತಿದ್ದರು.
ಪ್ರತಿಷ್ಠಿತ ಓಪನ್ ಯೂನಿವರ್ಸಿಟಿಗಳಾದ ಡೆಲ್ಲಿ ಅಕಾಡೆಮಿಕ್ ಕೌನ್ಸಿಲ್ ಫಾರ್ ಹೈಯರ್ ಎಜುಕೇಷನ್, ಮಾನವ್ ಭಾರತಿ ಯೂನಿವರ್ಸಿಟಿ, ಸೋಲಾನ್, ಹಿಮಾಚಲ ಪ್ರದೇಶ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್, ನಾಯ್ಡಾ, ಡಾ.ಸಿ.ವಿ.ರಾಮನ್ ಯೂನಿವರ್ಸಿಟಿ, ಬಿಲಾಸ್ಪುರ್, ವಿಲ್ಲನ್ಕೇರಿ ಯೂನಿವರ್ಸಿಟಿ, ಶಿಲ್ಲಾಂಗ್, ಮೇಘಾಲಯ ಸೇರಿದಂತೆ ಇತರೆ ಯೂನಿವರ್ಸಿಟಿಗಳಿಗೆ ಸಂಬಂಧಿಸಿದ ಕೋರ್ಸ್ಗಳಾದ ಬಿಎ, ಬಿಕಾಂ, ಬಿಬಿಎ, ಎಂಬಿಎ, ಎಂಸಿಎ, ಬಿಇ, ಬಿ.ಟೆಕ್, ಎಂಇ, ಎಂಟೆಕ್ ಅಲ್ಲದೆ ಇನ್ನಿತರ ಕೋರ್ಸ್ಗಳಿಗೆ ದೂರ ಶಿಕ್ಷಣದ ಮೂಲಕ ಪರೀಕ್ಷೆ ಕೊಡಿಸುವುದಾಗಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿದ್ದರು.
ವಿವಿಧ ಕೋರ್ಸ್ಗಳಿಗೆ ಸಂಬಂಧಿಸಿದಂತೆ ಪ್ರತಿ ಅಭ್ಯರ್ಥಿಗಳಿಂದ 40 ಸಾವಿರದಿಂದ 2 ಲಕ್ಷ ರೂ. ಪಡೆದುಕೊಂಡು ಪರೀಕ್ಷೆಯನ್ನು ತಮ್ಮ ಇನ್ಸ್ಟಿಟ್ಯೂಟ್ನಲ್ಲೇ ಬರೆಸಿ ನಂತರ ಅವರಿಗೆ ನಕಲಿ ಅಂಕಪಟ್ಟಿಗಳನ್ನು ಅಸಲಿ ಎಂದು ನೀಡಿ ವಂಚಿಸಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮಧ್ಯರಾತ್ರಿ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿ ವಂಚಕನನ್ನು ಬಂಧಿಸಿದ್ದಾರೆ.
ಯೂನಿವರ್ಸಿಟಿಗೆ ಸಂಬಂಧಿಸಿದ ಅಂಕಪಟ್ಟಿ ಗಳು, ರಬ್ಬರ್ಸ್ಟಾಂಪ್, ಕೃತ್ಯಕ್ಕೆ ಬಳಸಿದ್ದ ಕಂಪ್ಯೂಟರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ತನ್ನ ಕಚೇರಿಯಲ್ಲೇ ಅಂಕ ಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದುದು ಕಂಡುಬಂದಿದೆ. ಮಹಾಲಕ್ಷ್ಮಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ