ಎಚ್ಚರಿಕೆ, ಸ್ವಲ್ಪ ಯಾಮಾರಿದರೂ ನಿಮ್ಮ ಬ್ಯಾಂಕ್ ಅಕೌಂಟ್’ನಲ್ಲಿರೋ ಹಣ ಮಾಯವಾಗುತ್ತೆ…!

ಈ ಸುದ್ದಿಯನ್ನು ಶೇರ್ ಮಾಡಿ

Bank-frudes

ಬೆಂಗಳೂರು, ಅ.20- ಹಲೋ… ಹಲೋ… ನಾವು ಬ್ಯಾಂಕ್ ಸೇವಾ ಕೇಂದ್ರದಿಂದ ಮಾತನಾಡುತ್ತಿರೋದು… ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ. ಕೂಡಲೇ ನಿಮ್ಮ ಬ್ಯಾಂಕ್ ಮಾಹಿತಿ ತಿಳಿಸಿ ಎಂದು ಯಾರಾದರೂ ಕರೆ ಮಾಡಿದರೆ ಇರಲಿ ಎಚ್ಚರ..!  ಅವರ ಮಾತಿಗೆ ಮರುಳಾಗಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ, ಪಿನ್ ನಂಬರ್, ಸಿವಿವಿ, ಒನ್ ಟೈಮ್ ಪಾಸ್‍ವರ್ಡ್ ಅಥವಾ ಇಂಟರ್‍ನೆಟ್ ಬ್ಯಾಂಕಿಂಗ್ ಪಾಸ್‍ವರ್ಡ್ ನೀಡಿದರೆ ನಿಮ್ಮ ಖಾತೆಯಲ್ಲಿರುವ ಲಕ್ಷಾಂತರ ರೂಪಾಯಿ ಕ್ಷಣಮಾತ್ರದಲ್ಲಿ ಮಂಗಮಾಯವಾಗುತ್ತದೆ.

ಈಗೇನಿದ್ದರೂ ಎಲ್ಲ ಆನ್‍ಲೈನ್ ವ್ಯವಹಾರ. ವಾಟರ್‍ಬಿಲ್, ಕರೆಂಟ್ ಬಿಲ್, ಫೋನ್ ಬಿಲ್ ಇನ್ನಾವುದೇ ರೀತಿಯ ಬಿಲ್ ಪಾವತಿಸಲು ಬಹುತೇಕ ಮಂದಿ ಆನ್‍ಲೈನ್‍ಗೆ ಮೊರೆ ಹೋಗುತ್ತಾರೆ.  ಜನರ ಈ ಆನ್‍ಲೈನ್ ವ್ಯಾಮೋಹವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಖದೀಮರು ಆನ್‍ಲೈನ್ ಮೂಲಕವೇ ಜನರಿಗೆ ಮಂಕುಬೂದಿ ಎರಚಿ ಲಕ್ಷಾಂತರ ರೂಪಾಯಿ ಲಪಟಾಯಿಸುತ್ತಿದ್ದಾರೆ. ಈ ಆನ್‍ಲೈನ್ ದೋಖಾಕ್ಕೆ ಕೇವಲ ಸಾಮಾನ್ಯ ಜನರು ಮಾತ್ರ ಸಿಕ್ಕಿಬೀಳುತ್ತಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು, ನಟ-ನಟಿಯರು, ಗಣ್ಯ ವ್ಯಕ್ತಿಗಳು ಹಾಗೂ ಶ್ರೀಮಂತರು ಬಲಿಪಶುಗಳಾಗುತ್ತಿದ್ದಾರೆ.

ತಮ್ಮ ಚಾಣಾಕ್ಷ ಮಾತುಗಾರಿಕೆಯಿಂದ ಎಂಥವರನ್ನೂ ಮರುಳು ಮಾಡುವಂತಹ ಕಲೆಯನ್ನು ಆನ್‍ಲೈನ್ ಖದೀಮರು ರೂಢಿಸಿಕೊಂಡಿದ್ದಾರೆ. ಇಂತಹ ಖದೀಮರ ಮಾತಿನ ಮೋಡಿಗೆ ಮರುಳಾದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಎ.ಎಂ.ಪ್ರಸಾದ್ ಅವರು ತಮ್ಮ ಖಾತೆಯಲ್ಲಿದ್ದ 2 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಎ.ಎಂ.ಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ ನಾವು ಬ್ಯಾಂಕ್ ಸೇವಾ ಕೇಂದ್ರದಿಂದ ಮಾತನಾಡುತ್ತಿರೋದು. ನಿಮ್ಮ ಕ್ರೆಡಿಟ್ ಕಾರ್ಡ್ ಅವಧಿ ಮುಗಿದಿದೆ. ಕಾರ್ಡ್ ನವೀಕರಣ ಮಾಡಲು ನಿಮ್ಮ ಬ್ಯಾಂಕ್ ಡೀಟೈಲ್ಸ್ ಕಳುಹಿಸಿ ಎಂದು ಮರುಳು ಮಾಡಿದ್ದ. ಆತನ ಮಾತನ್ನು ನಂಬಿದ ಎ.ಎಂ.ಪ್ರಸಾದ್ ಅವರು ಕೂಡಲೇ ತಮ್ಮ ಬ್ಯಾಂಕ್‍ನ ವಿವರವನ್ನು ಅನಾಮಿಕನಿಗೆ ರವಾನಿಸಿದರು. ಪ್ರಸಾದ್ ಅವರು ಮಾಹಿತಿ ರವಾನಿಸಿದ ಕೆಲವೇ ಕ್ಷಣಗಳಲ್ಲಿ ಅವರ ಖಾತೆಯಲ್ಲಿದ್ದ 2 ಲಕ್ಷ ರೂ. ಖೋತಾ ಆಯಿತು.

2 ಲಕ್ಷ ರೂ. ಖೋತಾ ಆದ ಮಾಹಿತಿ ಮೊಬೈಲ್‍ನಲ್ಲಿ ಬರದಿದ್ದರೆ ಅವರ ಖಾತೆಯಲ್ಲಿದ್ದ ಇನ್ನಷ್ಟು ಹಣ ಮಂಗಮಾಯವಾಗುತ್ತಿತ್ತು. ತಕ್ಷಣ ಎಚ್ಚೆತ್ತುಕೊಂಡ ಎ.ಎಂ.ಪ್ರಸಾದ್ ಅವರು ಬ್ಯಾಂಕ್‍ಗೆ ಕರೆ ಮಾಡಿ ತಮ್ಮ ಖಾತೆಯನ್ನು ಸ್ಥಗಿತಗೊಳಿಸಿ ಕೂಡಲೇ ಸೈಬರ್ ಠಾಣೆಗೆ ದೂರು ನೀಡಿದರು.
ದೇಶ-ವಿದೇಶಗಳಲ್ಲೂ ಆನ್‍ಲೈನ್ ದೋಖಾ ಹೆಚ್ಚಾಗುತ್ತಿದ್ದು, ಈ ಖದೀಮರ ಮಾತಿಗೆ ಮರುಳಾಗಬೇಡಿ ಎಂದು ಬಹುತೇಕ ಬ್ಯಾಂಕ್‍ನವರು ತಮ್ಮ ಗ್ರಾಹಕರಿಗೆ ಪದೇ ಪದೇ ಮೊಬೈಲ್ ಸಂದೇಶ ರವಾನಿಸುತ್ತಿದ್ದರೂ ಈ ದೋಖಾಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇರುವುದು ತಲೆನೋವಾಗಿ ಪರಿಣಮಿಸಿದೆ.

ಇನ್ನು ಮುಂದಾದರೂ ಸಾರ್ವಜನಿಕರು ಇಂತಹ ಮಾತಿಗೆ ಮರುಳಾಗಿ ತಮ್ಮ ಬ್ಯಾಂಕ್‍ಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೇ ವ್ಯಕ್ತಿಗೂ ನೀಡಬಾರದು.
ಒಂದು ವೇಳೆ ತಮ್ಮ ಕಾರ್ಡ್ ಅವಧಿ ಮುಗಿದಿದ್ದರೆ ಇಲ್ಲವೆ ಯಾವುದೇ ಬದಲಾವಣೆ ಇದ್ದರೆ ಸ್ವತಃ ತಾವೇ ತಮ್ಮ ಬ್ಯಾಂಕ್ ಶಾಖೆಗೆ ತೆರಳಿ ಬದಲಾವಣೆ ಮಾಡಿಸಿಕೊಳ್ಳಬೇಕೆ ಹೊರತು ಆನ್‍ಲೈನ್ ದೋಖಾಕ್ಕೆ ಬಲಿಯಾದರೆ ನಿಮ್ಮ ಖಾತೆಯಲ್ಲಿರುವ ಹಣ ಕಳೆದುಕೊಳ್ಳಬೇಕಾಗುತ್ತದೆ.  ಹೀಗಾಗಿ ಇನ್ನು ಮುಂದೆ ಮೊಬೈಲ್‍ನಲ್ಲಿ ಯಾರಾದರೂ ನಿಮ್ಮನ್ನು ಸಂಪರ್ಕಿಸಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ, ಪಿನ್ ನಂಬರ್, ಸಿವಿವಿ, ಒನ್ ಟೈಮ್ ಪಾಸ್‍ವರ್ಡ್ ಅಥವಾ ಇಂಟರ್‍ನೆಟ್ ಬ್ಯಾಂಕಿಂಗ್ ಪಾಸ್‍ವರ್ಡ್ ಕೇಳಿದರೆ ಅವರಿಗೆ ಛೀಮಾರಿ ಹಾಕಿ ಕೂಡಲೇ ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿ.

Facebook Comments

Sri Raghav

Admin