ಇಂದೂ ಕೂಡ ಉಚಿತವಾಗಿ KSRTC ಬಸ್‍ಗಳಲ್ಲಿ ಊರು ಕಡೆ ಪ್ರಯಾಣ ಬೆಳೆಸಿದ ಕಾರ್ಮಿಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 5-ಲಾಕ್‍ಡೌನ್‍ನಿಂದಾಗಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಕಾರ್ಮಿಕರನ್ನು ಅವರವರ ಊರುಗಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಉಚಿತವಾಗಿ ಕಳುಹಿಸುವ ವ್ಯವಸ್ಥೆ ಮೂರನೇ ದಿನವಾದ ಇಂದು ಕೂಡ ಮುಂದುವರಿಯಿತು.

ಸತತ ಮೂರನೇ ದಿನವಾದ ಇಂದು ನೂರಾರು ಬಸ್‍ಗಳಲ್ಲಿ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಿದರು.ಇಂದು ಬೆಳಗ್ಗೆ ಕೆಂಪೇಗೌಡ (ಮೆಜೆಸ್ಟಿಕ್) ಬಸ್ ನಿಲ್ದಾಣಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಅವರು ಭೇಟಿ ನೀಡಿ ಕಾರ್ಮಿಕರಿಗೆ ನೀರು, ಆಹಾರದ ಪೊಟ್ಟಣಗಳು, ಸ್ಯಾನಿಟೈಸರ್, ಮಾಸ್ಕ್‍ಗಳನ್ನು ವಿತರಿಸಿದರು.

ಅವರಿಗೆ ಸಚಿವರಾದ ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ , ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ನಟಿ ತಾರಾ ಅನುರಾಧ ಮತ್ತಿತರ ಗಣ್ಯರು ಸಾಥ್ ನೀಡಿದರು.ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕು, ಎಲ್ಲ ಕಾರ್ಮಿಕರಿಗೂ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕಳೆದ ಭಾನುವಾರ ಒಟ್ಟು 500 ಬಸ್‍ಗಳ ಮೂಲಕ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಗಿತ್ತು. ನಿನ್ನೆಯೂ ಬೆಂಗಳೂರಿನಿಂದ 800 ಬಸ್ಸುಗಳನ್ನು ಇತರೆ ಭಾಗಗಳಿಂದ 200 ಬಸ್ ಸೇರಿದಂತೆ ಒಟ್ಟು 1000 ಬಸ್ ಗಳಲ್ಲಿ ಕಳುಹಿಸಿಕೊಡಲಾಗಿತ್ತು. ಕಳೆದ ಮೂರು ದಿನಗಳಿಂದ ಒಟ್ಟು 59,880 ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣಿಸಿದ್ದಾರೆ.

ಹೀಗಾಗಿ ಇಂದೂ ಸಹ ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಬಸ್ ನಿಲ್ದಾಣದಲ್ಲಿ ಜನ ಜಂಗುಳಿಯೇ ನೆರೆದಿತ್ತು. ಇಂದು ಬೆಳಗ್ಗೆ 9ಗಂಟೆಯಿಂದಲ್ಲೂ ಕಾರ್ಮಿಕರು ಪ್ರಯಾಣಿಸಲು ಬಸ್ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಮಿಕರಿಗೆ ಉಚಿತ ಬಸ್ ಸೇವೆಯನ್ನು ಗುರುವಾರದವರೆಗೂ ಸರ್ಕಾರ ವಿಸ್ತರಿಸಿದೆ. ಬಹುತೇಕ ಕಾರ್ಮಿಕರು ಬೆಂಗಳೂರು ಬಿಟ್ಟಿರುವುದರಿಂದ ನಗರದಲ್ಲಿ ಕಾರ್ಮಿಕರ ಸಮಸ್ಯೆ ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ.

Facebook Comments

Sri Raghav

Admin