‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ಯುವತಿ ಪೊಲೀಸ್ ಠಾಣೆಗೆ ಹಾಜರ್‌

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.11-ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ನಗರದ ಜಯಲಕ್ಷ್ಮಿಪುರ ಪೊಲೀಸ್ ಠಾಣೆಗೆ ಹಾಜರಾದರು. ನಳಿನಿ ಅವರು ಜ.8 ರಂದು ಸಿಎಎ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಫ್ರೀ ಕಾಶ್ಮೀರ ಎಂಬ ಫಲಕ ಪ್ರದರ್ಶಿಸಿದ್ದರು. ಇದು ವಿವಾದಗಳಿಗೆ ಹಾಗೂ ಕೆಲವರ ಆಕ್ರೋಶಕ್ಕೂ ಎಡೆಮಾಡಿತ್ತು.

ಘಟನೆ ನಂತರ ನಾಪತ್ತೆಯಾಗಿದ್ದ ಆಕೆ ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು. ನ್ಯಾಯಾಲಯ ಕೆಲವು ನಾಲ್ಕು ಷರತ್ತುಗಳನ್ನು ಹಾಕಿ ಜಾಮೀನು ನೀಡಿತ್ತು. ಇಂದು ಬೆಳಗ್ಗೆ ಜಯಲಕ್ಷ್ಮಿಪುರಂ ಠಾಣೆಗೆ ತಂದೆಯೊಂದಿಗೆ ಹಾಜರಾಗಿ ಘಟನೆ ನಡೆದ ದಿನದ ಬಗ್ಗೆ ಯುವತಿ ಮಾಹಿತಿ ನೀಡಿದ್ದಾರೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನಿ, ನಾನು ಮೈಸೂರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿನಿ.

ನನ್ನನ್ನು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಯಾರೂ ಕೋರಿರಲಿಲ್ಲ. ಸ್ವಯಂಪ್ರೇರಿತಳಾಗಿ ಭಾಗವಹಿಸಿದ್ದೆ. ನಾನೇ ಸಿದ್ಧಪಡಿಸಿದ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದುದು ನಿಜ ಎಂದು ಒಪ್ಪಿಕೊಂಡರು. ಆದರೆ ಕಾಶ್ಮೀರದಲ್ಲಿ ಇಂಟರ್‍ನೆಟ್ ಮತ್ತಿತರ ಸೇವೆ ರದ್ದುಪಡಿಸಿದ್ದನ್ನು ಖಂಡಿಸಿ ಕೂಡಲೇ ಎಲ್ಲಾ ಸೇವೆ ಪ್ರಾರಂಭಿಸುವಂತೆ ಆಗ್ರಹಿಸಿ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದೇನೆಯೇ ಹೊರತು ಬೇರೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ.

ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ನಳಿನಿ ತಿಳಿಸಿದ್ದಾರೆ. ನ್ಯಾಯಾಲಯ ನನಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಈಬಗ್ಗೆ ಮಾಹಿತಿ ನೀಡಲೆಂದೇ ಠಾಣೆಗೆ ಬಂದಿದ್ದೆ ಎಂದು ಆಕೆ ತಿಳಿಸಿದರು.

Facebook Comments