ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಮೈನವಿರೇಳಿಸುವ ಅಧ್ಯಾಯ ಇಲ್ಲಿದೆ ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

flag

ವಾಸುದೇವಮೂರ್ತಿ
ಆಂಗ್ಲರ ದಬ್ಬಾಳಿಕೆಯಿಂದ ಭಾರತ ಮಾತೆಯನ್ನು ವಿಮುಕ್ತಿಗೊಳಿಸಲು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕಲಿಗಳು ನಡೆಸಿದ ಹೋರಾಟ ಮೈನವಿರೇಳಿಸುವಂಥದ್ದು. ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆ ಹೊಂದಲು ನಡೆಸಿದ ಹೋರಾಟ ಜಗತ್ತಿನ ಚರಿತ್ರೆಯಲ್ಲಿ ರೋಮಾಂಚನ ಕಥೆ. ಭಾರತಸ್ವಾತಂತ್ರ್ಯ ಸಂಗ್ರಾಮಕ್ಕೆ 150 ವರ್ಷಗಳ ಸುದೀರ್ಘ ಇತಿಹಾಸವಿದೆ. ಆಗಿನ ರಾಜ ಮಹಾರಾಜರುಗಳು, ವೀರರಾಣಿಯರು ವಿದೇಶಿ ಆಡಳಿತಗಾರರ ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ದ ದನಿಎತ್ತಿ ದಿಟ್ಟ ಹೋರಾಟ ನಡೆಸಿದ್ದಾರೆ.

ಮೈಸೂರು ಹುಲಿ ಟಿಪ್ಪು ಸುಲ್ತಾನ್, ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಪಾಂಡ್ಯ  ಕಟ್ಟಿ ಬೊಮ್ಮನ್ ಮೊದಲಾದವರ
ಹೋರಾಟದ ಕೆಚ್ಚು ನಮ್ಮಲ್ಲಿ ಒಡಮೂಡಿ ನಿಲ್ಲುತ್ತದೆ.

ind

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
1753ರ ಪ್ಲಾಸೀ ಕದನದಿಂದ ಸರಿಯಾಗಿ 104 ವರ್ಷಗಳ ನಂತರ ಅಂದರೆ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸಿಪಾಯಿ ದಂಗೆ ಮೂಲಕ ಕಿಡಿಕಾರಿತು. 1857-1858ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭುಗಿಲೆದ್ದ ದಂಗೆ ಇದು.

ಇದಕ್ಕೆ ಕಾರಣವೆಂದರೆ ಬ್ರಿಟಿಷ್ ಸೈನ್ಯದಿಂದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಲೀ-ಎನ್‍ಫೀಲ್ಡ್ ಬಂದೂಕಿನ ತೋಟಾಗಳಿಗೆ ದನದ ಮತ್ತು ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ಸುದ್ದಿ. ಹೀಗಾಗಿ ದನ ಮತ್ತು ಹಂದಿಯ ಕೊಬ್ಬು ಇದ್ದರೆ ಹಿಂದು ಮತ್ತು ಮುಸ್ಲಿಂ ಸಿಪಾಯಿಗಳ ಮನಸ್ಸು ನೋಯುವಂತಿತ್ತು. ಈ ಧಾರ್ಮಿಕ ಸಂಗತಿ ಹಿನ್ನೆಲೆಯಲ್ಲಿ ಫೆಬ್ರವರಿ 1857ರಲ್ಲಿ ಸಿಪಾಯಿಗಳು ದಂಗೆ ಎದ್ದು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು.

34ನೇ ದೇಶೀಯ ಪದಾತಿದಳದ ಸಿಪಾಯಿ ಮಂಗಲ್ ಪಾಂಡೆ 1857ರ ಮಾರ್ಚ್‍ನಲ್ಲಿ ಬ್ರಿಟಿಷ್ ಸಾರ್ಜೆಂಟ್ ಲೆಫ್ಟಿನೆಂಟ್ ಬಾಘ್ ಮೇಲೆ ದಾಳಿ ಮಾಡಿ ಮತ್ತೊಬ್ಬ ಯೋಧನನ್ನು ಗಾಯಗೊಳಿಸಿದನು. ಈ ಘಟನೆ ಹಿನ್ನೆಲೆಯಲ್ಲಿ ಜನರಲ್ ಹರ್ಸೇ, ಪಾಂಡೆಯನ್ನು ಬಂಧಿಸಲು ಜಮಾದಾರನಿಗೆ ಆದೇಶಿಸಿದನಾದರೂ, ಬಂಧಿಸಲು ಆತ ನಿರಾಕರಿಸಿದ. ಏಪ್ರಿಲ್ 7ರಂದು ಮಂಗಲ್ ಪಾಂಡೆ ಯನ್ನು ಜಮಾದಾರ ಈಶ್ವರಿ ಪ್ರಸಾದ್ ಜೊತೆ ನೇಣು ಹಾಕಲಾಯಿತು. ಸಾಮೂಹಿಕ ಶಿಕ್ಷೆಯಾಗಿ ಇಡೀ ತುಕಡಿಯನ್ನೇ ವಿಸರ್ಜಿಸಲಾಯಿತು. ಮೇ 10ರಂದು 11ನೇ ಮತ್ತು 20ನೇ ಅಶ್ವದಳಗಳು ಸೇರಿದಾಗ ಸವಾರರು ರೋಷದಿಂದ ಮೇಲಾಧಿಕಾರಿಗಳನ್ನು ಬಗ್ಗು ಬಡಿದರು. ಅನಂತರ ಮೂರನೇ ತುಕಡಿಯನ್ನು ಸ್ವತಂತ್ರಗೊಳಿಸಲಾಯಿತು. ಈ ಘಟನೆ ನಂತರ ದೆಹಲಿ ಸೇರಿದಂತೆ ಉತ್ತರ ಭಾರತದ ತುಂಬೆಲ್ಲಾ ಬಂಡಾಯ ಹಬ್ಬಿತು.

ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕಲು ಬ್ರಿಟಿಷರು ಒಂದೆಡೆ ಒಡೆದು ಆಳುವ ನೀತಿಯನ್ನು ಅನುಸರಿಸಿದರೆ ಇನ್ನೊಂದೆಡೆ ದಮನಕಾರಿ ಕರಾಳ ಕಾಯ್ದೆ-ಮಸೂದೆಗಳನ್ನು ಜಾರಿಗೊಳಿಸಿದರು. ಇಂಥ ಕ್ರೂರ ಕಾಯ್ದೆಯಲ್ಲಿ ರೌಲತ್ ಮಸೂದೆ ಕೂಡ ಒಂದು.
ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಈ ಕಾಯ್ದೆಗಳಿಂದ ಆದ ಚಳವಳಿಗಳು ಏಪ್ರಿಲ್ 13, 1919ರಂದು ಪಂಜಾಬ್‍ನ ಅಮೃತಸರದಲ್ಲಿ ನಡೆದ ಜಲಿಯನ್ ವಾಲಾಭಾಗ್ ಹತ್ಯಾಕಾಂಡದಲ್ಲಿ ಪರ್ಯವಸಾನವಾಯಿತು. ಇದನ್ನು ಅಮೃತಸರದ ನರಮೇಧ ಎಂದೂ ಹೆಸರಿಸಲಾಗಿದೆ.

ಬ್ರಿಟಿಷ್ ಸೈನ್ಯದ ಕಮಾಂಡರ್ ಆಗಿದ್ದ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ತನ್ನ ಸೈನಿಕರಿಗೆ ಸುಮಾರು ಹತ್ತು ಸಾವಿರಷ್ಟಿದ್ದ ನಿಶ್ಯಸ್ತ್ರ ಮತ್ತು ಅಮಾಯಕ ಜನರ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ. ಅವರು ಮಾರ್ಷಲ್ ಲಾ ಜಾರಿಯಾಗಿರುವ ಸಂಗತಿ ತಿಳಿಯದೆ, ಅಮೃತಸರದ ಜಲಿಯನ್ ವಾಲಾಭಾಗ್ ಎಂಬ ತೋಟದಲ್ಲಿ ಸಿಖ್ ಹಬ್ಬವಾದ ಬೈಶಾಖಿಯನ್ನು ಆಚರಿಸಲು ಸಭೆ ಸೇರಿದ್ದರು.

ಈ ಘಟನೆಯಲ್ಲಿ ಒಟ್ಟು  1,650 ಸುತ್ತು ಗುಂಡುಗಳನ್ನು ಹಾರಿಸ ಲಾಯಿತು. 739 ಮಂದಿ ದುರಂತ ಸಾವಿಗೀಡಾಗಿ, 1,137 ಜನರು ಗಾಯಗೊಂಡರು.
ಖೈಡಾ ಚಳವಳಿ ರೈತರು ಸರ್ಕಾರಕ್ಕೆ ಯಾವುದೇ ತೆರಿಗೆಯನ್ನು ನೀಡುವುದಿಲ್ಲವೆಂದು ಪ್ರತಿಭಟಿಸಿದ ಸತ್ಯಾಗ್ರಹವೇ ಖೈಡಾ ಚಳವಳಿ.  ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವದೇಶಿ ಮಂತ್ರ. ಸತ್ಯಾಗ್ರಹದ ತತ್ವವಾಗಿತ್ತು. ಹಿಂಸೆಗೆ ಚಿಕ್ಕ ಗುಂಪು ಸಿದ್ದವಾದರೆ, ಚಳವಳಿಯಲ್ಲಿ ಭಾಗವಹಿಸಲು ಜನಸಮೂಹವೇ ಸಿದ್ದವಾಗುತ್ತದೆ ಎಂಬುದು ಇವರ ತತ್ವದ ಸಾರವಾಗಿತ್ತು. ಸ್ವದೇಶಿ ಮಂತ್ರ ಗಾಂಧೀಜಿಯವರ ಒಂದು ರಾಷ್ಟ್ರೀಯ ಅಸ್ತ್ರವಾಗಿತ್ತು.

ಗಾಂಧೀಜಿಯವರು ಅಲಹಾಬಾದ್‍ಗೆ ತೆರಳಿ ಬಟ್ಟೆ ಗಿರಣಿ ಕಾರ್ಮಿಕರ ಮತ್ತು ಮಾಲೀಕರ ನಡುವೆ ಉಂಟಾಗಿದ್ದ ಬಿಕ್ಕಟ್ಟನ್ನು ಆಮರಣಾಂತ ಉಪವಾಸ ಕೈಗೊಂಡು ಬಗೆಹರಿಸಿದರು. ಬಿಹಾರದ ಚಂಪಾರಣ್ಯದಲ್ಲಿ ಕರಭಾರದಿಂದ ತತ್ತರಿಸುತ್ತಿದ್ದ ಕಡು ಬಡವರಾದ ಕೃಷಿಕರು, ತಿನ್ನುವ ಧಾನ್ಯವನ್ನೇ ಮಾರಿ ವಾಣಿಜ್ಯ ಬೆಳೆ ತೆಗೆಯಲು ಒತ್ತಾಯಕ್ಕೆ ಒಳಗಾದ ಭೂಮಿ ಇಲ್ಲದ ರೈತರ ಹಾಗೂ ತಿನ್ನಲೂ ಸಾಲದಷ್ಟು ಸಂಬಳ ಪಡೆಯುತ್ತಿದ್ದವರ ಪರವಾಗಿ ಗಾಂಧಿ ನಿಂತರು. ಗಾಂಧಿ 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ದೇಶಭಕ್ತಿಯ ನವಭಾರತದ ಕನಸೊಂದನ್ನು ಕಟ್ಟಿಕೊಂಡಿದ್ದರು. ವರ್ಷಗಟ್ಟಲೆ ದೇಶದ ಉದ್ದಗಲಕ್ಕೂ ಸಂಚರಿಸಿ ಭಾರತದ ರಾಜ್ಯಗಳು, ನಗರ ಪಟ್ಟಣಗಳು, ಹಳ್ಳಿಗಳನ್ನೆಲ್ಲ ಸುತ್ತುತ್ತಾ ದೇಶದ ಜನರ ಕುಂದು ಕೊರತೆಗಳ ಬಗ್ಗೆ ತಿಳಿಯಲಾರಂಭಿಸಿದರು.

india-map

ಚೌರಾಚೌರಿ ಘಟನೆ
1922ರಲ್ಲಿ ಗೋರಖ್‍ಪುರ್‍ಚೌರಾಚೌರಿ ಘಟನೆ ನಡೆಯಿತು. ಗಾಂಧೀಜಿ ನೇತೃತ್ವದಲ್ಲಿ ದೇಶಾದ್ಯಂತ ಅಸಹಕಾರ ಚಳವಳಿ ನಡೆಯುತ್ತಿದ್ದ ಸಂದರ್ಭವದು.  ಈ ಸಂದರ್ಭದಲ್ಲಿ ಉದ್ರಿಕ್ತ ಗುಂಪೊಂದು ಪೊಲೀಸ್ ಚೌಕಿಯತ್ತ ಮುನ್ನುಗ್ಗಲು ಯತ್ನಿಸಿದಾಗ ಠಾಣಾಧಿಕಾರಿ ಗೋಲಿಬಾರ್‍ಗೆ ಆದೇಶ ನೀಡಿದ. ಇದರಿಂದ ಮೂವರು ಪ್ರತಿಭಟನಾಕಾರರು ಮೃತಪಟ್ಟು ಹಲವರು ಗಾಯಗೊಂಡರು.

ಇನ್ನಷ್ಟು ಕೆರಳಿ ಚೌಕಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಈ ಘಟನೆಯಲ್ಲಿ ಠಾಣೆ ಒಳಗೆ ಸಿಲುಕಿದ 23 ಪೊಲೀಸರು ಹತರಾದರು.  ಪೊಲೀಸರ ಘೋರ ಹತ್ಯೆಯಿಂದಾಗಿ ಗಾಂಧಿ ಒಂದು ಕಠಿಣ ನಿರ್ಧಾರ ಕೈಗೊಂಡು 1922ರಲ್ಲಿ ಚಳವಳಿಯನ್ನು ಹಿಂದಕ್ಕೆ ಪಡೆದರು.

(ಮುಂದುವರಿಯುವುದು…)

Facebook Comments

Sri Raghav

Admin

6 thoughts on “ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಮೈನವಿರೇಳಿಸುವ ಅಧ್ಯಾಯ ಇಲ್ಲಿದೆ ನೋಡಿ..!

Comments are closed.