ಹೊತ್ತಿ ಹುರಿದ ಸ್ಲೀಪರ್ ಕೋಚ್ ಬಸ್, ತಪ್ಪಿದ ಭಾರಿ ದುರಂತ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಜ.21- ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದ ನೈಋತ್ಯ ವಲಯದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್‍ಕೋಚ್ ಬಸ್‍ನಲ್ಲಿ ಮಾರ್ಗಮಧ್ಯೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ. ಬೆಳಗಾಂ ಡಿಪೋಗೆ ಸೇರಿದ ಕೆಎ-22ಎಫ್2068 ಸ್ಲೀಪರ್ ಕೋಚ್ ಕರೋಲಾ ಬಸ್ ಬೆಳಗಾವಿಯಿಂದ 30 ಮಂದಿ ಪ್ರಯಾಣಿಕರನ್ನು ಕರೆದುಕೊಂಡು ರಾತ್ರಿ ಹೊರಟಿದೆ.

ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ-4ರ ಚಿತ್ರದುರ್ಗ ಗ್ರಾಮಾಂತರ ವ್ಯಾಪ್ತಿಯ ಐಮಂಗಲ ಗೇಟ್ ಸಮೀಪದ ದೊಡ್ಡಬಾನಹಳ್ಳಿ ಬಳಿ ಬಸ್ ಹಿಂಬದಿಯಲ್ಲಿದ್ದ ಎಂಜಿನ್‍ನಿಂದ ಹೊಗೆ ಕಾಣಿಸಿಕೊಂಡಿದೆ. ಚಾಲಕ ಬಸ್ ಚಲಾಯಿಸುತ್ತಿದ್ದಾಗ ಬಸ್‍ನಲ್ಲಿ ಏನೋ ತೊಂದರೆ ಕಾಣುತ್ತಿದೆ ಎಂದು ಅನುಮಾನಗೊಂಡು ಬಸ್‍ಅನ್ನು ರಸ್ತೆ ಬದಿ ನಿಲ್ಲಿಸಿ ಎಂಜಿನ್‍ಅನ್ನು ಪರಿಶೀಲಿಸಲು ಹೋದಾಗ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ.

ತಕ್ಷಣ ಚಾಲಕ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೆಲ್ಲರನ್ನೂ ಕೆಳಗಿಳಿಸಿ ಆ್ಯಂಬುಲೆನ್ಸ್ ಹಾಗೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.  ಪ್ರಯಾಣಿಕರೆಲ್ಲರೂ ಕೆಳಗಿಳಿಯುವಷ್ಟರಲ್ಲಿ ಹೊಗೆಯಿಂದ ಬೆಂಕಿ ಕಾಣಿಸಿಕೊಂಡು ಬಸ್ ಪೂರ್ತಿ ಆವರಿಸಿದೆ. ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು.

ವಿಷಯ ತಿಳಿದ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪ್ರಯಾಣಿಕರೆಲ್ಲರಿಗೂ ಬೇರೆ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಬೆಂಗಳೂರಿಗೆ ಕಳುಹಿಸಿದರು.
ಘಟನೆ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments