ಕೇವಲ 20ರೂ.ಗಾಗಿ ಸ್ನೇಹಿತನ ಕೊಂದಿದ್ದ ಮೂವರು ಚಿಂದಿ ಆಯುವವರ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಕೇವಲ 20ರೂ. ಹಣಕ್ಕಾಗಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಪ್ರಮುಖ ಆರೋಪಿ ಸೇರಿ ಮೂವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ಸಂಜಯ್ ಅಲಿಯಾಸ್ ಅಸ್ಸಾಮಿ(35)ಯನ್ನು ಕೊಲೆ ಮಾಡಿದ್ದ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ತಮಿಳುನಾಡು ಮೂಲದ ದೀಪಕ್, ಹೇಮಂತ್ ಮತ್ತು ಮಹದೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾಗಿರುವ ಸಂಜಯ್ ಹಾಗೂ ಆರೋಪಿಗಳೆಲ್ಲಾ ಸ್ನೇಹಿತರು. ಇವರೆಲ್ಲಾ ಚಿಂದಿ ಆಯುತ್ತಾ ಎಲ್ಲೆಂದರಲ್ಲಿ ಮಲಗಿ ಕಾಲಕಳೆಯುತ್ತಿದ್ದರು. ಸೆ.13ರಂದು ರಾತ್ರಿ 9.45ರಲ್ಲಿ ಸಂಜಯ್ ಬಾರ್‍ವೊಂದಕ್ಕೆ ಸ್ನೇಹಿತನನ್ನು ಕರೆದುಕೊಂಡು ಹೋಗಿದ್ದು, ಬೆಳಗಾಗುವಷ್ಟರಲ್ಲಿ ಬೊಮ್ಮನಹಳ್ಳಿ ಮುಖ್ಯರಸ್ತೆಯ ಬಾರ್ ಪಕ್ಕದ ಗಲ್ಲಿಯಲ್ಲಿ ಸಂಜಯ್‍ನನ್ನು ಕೊಲೆ ಮಾಡಲಾಗಿದೆ.

ಬೊಮ್ಮನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಚಿಂದಿ ಆಯುವವನಂತೆ ಕಾಣುತ್ತಿದ್ದ ರಕ್ತಸಿಕ್ತ ಶವವನ್ನು ನೋಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈತ ಚಿಂದಿ ಆಯುವನಂತೆ ಕಾಣುತ್ತಿದ್ದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿಂದಿ ಆಯುವವರನ್ನು ಕರೆತಂದು ವಿಚಾರಣೆ ನಡೆಸಿದಾಗ ಕೊಲೆಯಾಗಿರುವ ಯುವಕ ಸಂಜಯ್ ಎಂದು ಹೇಳಿದ್ದಾರೆ. ಅಲ್ಲದೆ, ಈತನ ಜತೆಯಲ್ಲಿ ಇರುತ್ತಿದ್ದವರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಘಟನಾ ಸ್ಥಳದಲ್ಲಿನ ಸಿಸಿ ಟಿವಿ ಪುಟೇಜ್‍ಗಳನ್ನು ಪಡೆದುಕೊಂಡು ಪರಿಶೀಲಿಸಿದಾಗ ಬಾರ್‍ವೊಂದಕ್ಕೆ ಹೋಗಿ ವಾಪಸ್ ಅಂಗಡಿಯಿಂದ ಸಂಜಯ್ ಮತ್ತೊಬ್ಬ ವ್ಯಕ್ತಿಯೊಂದಿಗೆ ಹೊರ ಬಂದಿರುವುದನ್ನು ಗಮನಿಸಿ ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದರು. ಪ್ರಮುಖ ಆರೋಪಿ ದೀಪಕ್ ತನ್ನ ಜತೆ ಇನ್ನಿಬ್ಬರು ಚಿಂದಿ ಆಯುವವರೊಂದಿಗೆ ಸೇರಿಕೊಂಡು ಸಂಜಯ್‍ನನ್ನು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಈತನ ಹೇಳಿಕೆ ಆಧರಿಸಿ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ದೀಪಕ್ ಬಳಿ ಸಂಜಯ್ 20 ರೂ. ಹಣವನ್ನು ಸಾಲವಾಗಿ ಪಡೆದಿದ್ದ. ಸೆ.13ರಂದು ರಾತ್ರಿ ಇವರೆಲ್ಲ ಒಂದೆಡೆ ಕೂತು ಊಟ ಮಾಡುತ್ತಿದ್ದಾಗ ದೀಪಕ್ ಹಣ ಕೇಳಿದ್ದಾನೆ. ಕ್ಷುಲ್ಲಕ ವಿಚಾರಕ್ಕಾಗಿ ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಆ ಸಂದರ್ಭದಲ್ಲಿ ದೀಪಕ್ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಫೋಟೋ ಪ್ರೇಮ್ ಪಟ್ಟಿಯಿಂದ ಸಂಜಯ್‍ನ ತಲೆ, ಕುತ್ತಿಗೆಗೆ ಹೊಡೆದಿದ್ದಾರೆ. ಅಲ್ಲದೆ, ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಎಂ.ಜೋಷಿ ಹಾಗೂ ಸಹಾಯಕ ಪೊಲೀಸ್ ಆಯುಕ್ತ ಕರಿಬಸವನಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ರವಿಶಂಕರ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments