ಹಣ್ಣು-ತರಕಾರಿ ಬೆಲೆ ಮತ್ತಷ್ಟು ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.20- ನವರಾತ್ರಿ ಸಂದರ್ಭದಲ್ಲಿ ಏರಿಕೆಯಾಗಿದ್ದ ಹಣ್ಣು, ತರಕಾರಿಗಳ ಬೆಲೆ ಇನ್ನೂ ಇಳಿಕೆಯಾಗಿಲ್ಲ, ದೀಪಾವಳಿ ವೇಳೆಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಲವು ಕಡೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಣ್ಣು, ತರಕಾರಿಗಳು ಕೊಳೆಯುತ್ತಿವೆ, ಇದರಿಂದ ಬೆಲೆ ಏರಿಕೆಯಾಗಿದೆ.

ಹಬ್ಬದ ವೇಳೆ ಕೆಲವು ತರಕಾರಿಗಳ ದರದಲ್ಲಿ ಮಾತ್ರ ಏರಿಕೆ ಆಗುವುದು ಸಾಮಾನ್ಯವಾಗಿತ್ತು. ಆದರೆ ದಸರಾ ನಂತರ ಹಾಗೂ ದೀಪಾವಳಿ ಹಬ್ಬದ ಎರಡು ವಾರಕ್ಕೂ ಮುನ್ನ ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದೆ. ದಸರಾ ಹಬ್ಬಕ್ಕೂ ಮುನ್ನ ದುಪ್ಪಟ್ಟಾಗಿದ್ದ ಕೆಜಿ ಟೊಮೆಟೋ ಬೆಲೆ ಈಗಲೂ 50-70 ರೂ. ಇದೆ.

ಅಡುಗೆಗೆ ಅಗತ್ಯವಾದ ಕೆಜಿ ಈರುಳ್ಳಿ ಬೆಲೆ ಎರಡು ವಾರದ ಹಿಂದೆ 30-35 ರೂ ಇದ್ದಿದ್ದು, ಸದ್ಯ 50-55 ರೂ. ಆಗಿದೆ. ಹಸಿ ಮೆಣಸಿನಕಾಯಿ 50 ರೂ. ಗಡಿ ದಾಟಿದೆ. ಹೀರೇಕಾಯಿ ಕೂಡ 40-60 ರೂ,ಗಳಲ್ಲಿ ಮಾರಾಟವಾಗುತ್ತಿದೆ. ಕ್ಯಾಪ್ಸಿಕಂ ಹಾಗೂ ಕ್ಯಾರೇಟ್ ಬೆಲೆ ಕೆಜಿಗೆ 70-80ರೂ. ಸೋರೆಕಾಯಿ 40-50 ರೂ. ತಲುಪಿದೆ. ಕೆಜಿ ಸೌತೆಕಾಯಿ, ಆಲೂಗಡ್ಡೆ ಹಾಗೂ ಬದನೆಗೆ ತಲಾ 30 ರೂ. ಕ್ಯಾಬೇಜ್ 40 ರೂ. ಇದೆ. ಒಂದು ಕಟ್ಟು ಕೊತ್ತಂಬರಿ ಸೊಪ್ಪು 60 ರೂ. ಪಾಲಕ್ 30 ರೂ. ಹಾಗೂ ಕರಿಬೇವಿಗೆ 10-20 ರೂ. ಇದೆ.

ಮಳೆಯಿಂದ ಮಾರುಕಟ್ಟೆಯಲ್ಲಿ ಗುಣಮಟ್ಟದ ಹೂವಿನ ಕೊರತೆ ಎದುರಾಗಿದ್ದು, ವ್ಯಾಪಾರ ಇಲ್ಲದೇ ವರ್ತಕರು ತೊಂದರೆಗೀಡಾಗಿದ್ದಾರೆ. ದೀಪಾವಳಿಗೆ ಮತ್ತೆ ಹೂವಿನ ದರ ಏರಿಕೆಯಾದರೆ ಉತ್ತಮ ವ್ಯಾಪಾರ ಮಾಡುವ ತವಕದಲ್ಲಿ ವರ್ತಕರಿದ್ದಾರೆ. ಹಣ್ಣಿನ ದರದಲ್ಲೂ ತುಸು ಇಳಿಕೆಯಾಗಿದ್ದು, ಸೇಬು 100 ರೂ. ಇದ್ದರೆ ದಾಳಿಂಬೆ 100 ರಿಂದ 120 ರೂ. ಆಗಿದೆ, ಮೋಸಂಬಿಗೆ 60-80ರೂ. ಇದ್ದು, ಏಲಕ್ಕಿ ಬಾಳೆ 70 ರೂ., ಪಚ್ಚಬಾಳೆ 30 ರೂ., ಸಪೆÇೀಟಾ 50ರೂ.ಗೆ ಮಾರಾಟವಾಗುತ್ತಿದೆ.

ದಸರಾಗೆ ಎರಡು ದಿನ ಮುನ್ನ ಹೂವಿಗೆ ಅಷ್ಟಾಗಿ ಬೆಲೆ ಇರಲಿಲ್ಲವಾದರೂ ನಂತರ ದಿಢೀರ್ ಏರಿಕೆ ಕಂಡಿತ್ತು. 1500-2000 ರೂ.ಗೆ ಮಾರಾಟವಾಗುತ್ತಿದ್ದ ಕೆಜಿ ಕನಕಾಂಬರ 200ರೂ.ಗೆ ಇಳಿದಿದೆ. ಹಾಗೆಯೇ ಮಲ್ಲಿಗೆ ದರ 600ರಿಂದ 100 ರೂ., ಗುಲಾಬಿ 260ರೂ. ನಿಂದ ಸುಮಾರು 60ರೂ.ಗೆ, ಚೆಂಡು ಹೂವು 20 ರೂ.ಗೆ ಮಾರಾಟವಾಗುತ್ತಿದೆ. 200 ರೂ . ಇದ್ದ ಸೇವಂತಿಗೆ 30-40 ರೂ.ಗೆ, 400 ರಿಂದ ಕಾಕಡ 100 ರೂ.ಗೆ ಕುಸಿತ ಕಂಡಿದೆ.

ದೀಪಾವಳಿಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ, ಆ ಸಂದರ್ಭದಲ್ಲಿ ಹಣ್ಣು ಹಾಗೂ ತರಕಾರಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ತೈಲ ಬೆಲೆಯೇರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅದರ ನಡುವೆಯೇ ಗಾಯದ ಮೇಲೆ ಬರೆ ಎಳೆಯುವಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತರಕಾರಿಗಳ ಬೆಲೆಯೂ ಗಗನಕ್ಕೇರಿದೆ.

ಅಕಾಲಿಕ ಮಳೆಯಿಂದ ಬೇಸಗೆ ಬೆಳೆ ಹಾನಿಯಾಗಿದ್ದರಿಂದಾಗಿ ಈರುಳ್ಳಿ, ಆಲೂಗೆಡ್ಡೆ, ಟೊಮೆಟೊ ಬೆಲೆ ಹೆಚ್ಚಳ ಕಂಡಿದೆ. ಹಲವು ರಾಜ್ಯಗಳಲ್ಲಿ ಕಳೆದ 2 ವಾರಗಳಿಂದ ತರಕಾರಿ ಬೆಲೆ ಏರುತ್ತಲೇ ಇದೆ. ಇತರೆ ರಾಜ್ಯಗಳಲ್ಲೂ ಬೆಲೆ ಏರಿಕೆಯಾಗಿದ್ದು, ಉತ್ತರಪ್ರದೇಶದಲ್ಲಿ 60 ರೂ.ಗಳಿಗೆ ಮಾರಾಟವಾಗುತ್ತಿದ್ದ ಒಂದು ಕೆ.ಜಿ ಟೊಮೆಟೊ ಬೆಲೆ 15 ರೂ. ಹೆಚ್ಚಳ ಕಂಡಿದೆ. ಈರುಳ್ಳಿ ಬೆಲೆ 20 ರೂ. ಹೆಚ್ಚಳ ಕಂಡಿದೆ.

ಈರುಳ್ಳಿ ಸ್ಟಾಕ್ ಕಡಿಮೆಯಿದ್ದು, ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ತೈಲ ಬೆಲೆಯೂ ಏರಿರುವುದರಿಂದ ತರಕಾರಿ ಸಾಗಣೆ ವೆಚ್ಚವೂ ದುಬಾರಿಯಾಗಿ ಪರಿಣಮಿಸಿದೆ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.  ಪಂಜÁಬ್, ಹರಿಯಾಣ ರಾಜ್ಯಗಳಲ್ಲಿ 1 ಕೆ.ಜಿ ನೀರುಳ್ಳಿ ಬೆಲೆ ಅರ್ಧ ಶತಕ ದಾಟಿದ್ದು, ಟೊಮೆಟೊ ಬೆಲೆ 40 ರೂ. ನಿಂದ 80 ರೂ.ಗಳಿಗೆ ಏರಿಕೆಯಾಗಿದೆ. ಬಟಾಣಿ ಕೆ.ಜಿಗೆ 120 ರೂ. ಹೂಕೋಸು ಕೆ.ಜಿಗೆ 100 ರೂ.ಗಳಿಗೆ ಮಾರಾಟವಾಗುತ್ತಿದೆ.

Facebook Comments