ತಾನೇ ತೊಡಿಕೊಂಡ ಗುಂಡಿಯಲ್ಲಿ ಖತಂ ಆದ ಫ್ರೂಟ್ ಇರ್ಫಾನ್..!

ಈ ಸುದ್ದಿಯನ್ನು ಶೇರ್ ಮಾಡಿ

– ಕಲ್ಮೇಶ ಮಂಡ್ಯಾಳ
ಹುಬ್ಬಳ್ಳಿ,ಆ.8- ಕೆಲ ವರ್ಷಗಳ ಹಿಂದೆ ಸಣ್ಣದಾಗಿ ಬೀದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತಿದ್ದ ಇರ್ಫಾನ್ ನಂತರ ಪುಡಿ ರೌಡಿ ಪಡೆ ಕಟ್ಟಿಕೊಂಡು ಸಣ್ಣ ಪುಟ್ಟ ರೌಡಿಸಂಗೆ ಇಳಿದ . ಮುಂದೊಂದು ದಿನ ತಾನೇ ತೋಡಿದ ಗುಂಡಿಯಲ್ಲಿ ಬಿದ್ದು ಹೆಣವಾಗುತ್ತೇನೆ ಎಂಬ ಕಲ್ಪನೆ ಸಹ ಇರದೇ ಅದೇ ರೌಡಿಸಂನಿಂದ ಇಹಲೋಕ ತ್ಯಜಿಸಬೇಕಾಯಿತು.

ಹಳೇ ಹುಬ್ಬಳ್ಳಿಯ ಅಲ್ ತಾಜ್ ಹೋಟೆಲ್ ಎದುರು ಗುರುವಾರ ಸಂಜೆ ಗುಂಡಿನ ದಾಳಿಗೆ ಈಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ ಮಧ್ಯರಾತ್ರಿ ಮೃತಪಟ್ಟಿದ್ದಾನೆ. ಆತನ ಹತ್ಯೆಗೆ ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರವೇ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇರ್ಫಾನ್ ವಿರುದ್ಧ ಬಡ್ಡಿ ದಂಧೆ, ರಿಯಲ್ ಎಸ್ಟೇಟ್ ವ್ಯವಹಾರ, ಭೂ ಕಬಳಿಕೆ, ಸಾಕ್ಷಿದಾರರಿಗೆ ಬೆದರಿಕೆ ಸೇರಿ ಅನೇಕ ಆರೋಪಗಳಿದ್ದವು. ಆ ಹಿನ್ನೆಲೆಯಲ್ಲಿ 2020 ಅಕ್ಟೋಬರ್ 21ರವರೆಗೆ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು.

ಹೈಕೋರ್ಟ್ನಿಂದ ತಡೆಯಾಜ್ಞೆ ತಂದು ಜಿಲ್ಲೆಗೆ ವಾಪಸಾಗಿದ್ದ. ನಂತರವೂ ಆತ ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ. ಇದೇ ವಿಚಾರವಾಗಿ ಆಕ್ರೋಶಗೊಂಡಿದ್ದ ಯುವಕರ ಗುಂಪೊಂದು ಹೊಂಚು ಹಾಕಿ, ಮಗನ ಆರತಕ್ಷತೆ ದಿನವೇ ಇರ್ಫಾನ್ ಮೇಲೆ ಗುಂಡಿನ ಸುರಿಮಳೆಗೈದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶೂಟೌಟ್ ಪ್ರಕರಣ ಭೇದಿಸಲು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ನೇತೃತ್ವದಲ್ಲಿ 6 ವಿಶೇಷ ತಂಡಗಳನ್ನು ರಚಿಸಲಾಗಿದೆ. ಹು-ಧಾ ಅವಳಿ ನಗರದ ಇನ್ಸ್ಪೆಕ್ಟರ್ಗಳು ತನಿಖಾ ತಂಡದಲ್ಲಿದ್ದಾರೆ.

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ: ತಲೆ ಹಾಗೂ ತೊಡೆ ಭಾಗಕ್ಕೆ ಗುಂಡು ತಗುಲಿದ್ದರಿಂದ ತೀವ್ರ ರಕ್ತಸ್ರವಾವವಾಗಿದ್ದ ಇರ್ಫಾನ್ನನ್ನು ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಆತ ಮಧ್ಯರಾತ್ರಿ ಮೃತಪಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಕಿಮ್ಸ ಶವಾಗಾರಕ್ಕೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಕರೊನಾ ಪರೀಕ್ಷೆಗೆ ಒಳಪಡಿಸಲಾಯಿತು.

ಮಧ್ಯಾಹ್ನ ಕಮರಿಪೇಟ ಖಬರಸ್ತಾನದಲ್ಲಿ ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

# ಪರಿಣತ ಶೂಟರ್ಗಳಲ್ಲ:
ಇರ್ಫಾನ್ಗೆ ಗುಂಡೇಟು ಹಾಕಿದವರು ಪರಿಣತ ಅಥವಾ ಶಾರ್ಪ್ ಶೂಟರ್ಗಳಲ್ಲ. ಹಾಗಾಗಿ ಹೊರಗಿನವರಲ್ಲ; ಹುಬ್ಬಳ್ಳಿ-ಧಾರವಾಡದವರೇ ಎಂದು ಪೊಲೀಸರು ಶಂಕಿಸಿದ್ದರು ಎನ್ನಲಾಗಿದೆ. ಸಿಸಿ ಟಿವಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ, ಆರೋಪಿಗಳು ಹೊಸ ಪಾತಕಿಗಳಂತೆ ಕಂಡುಬಂದಿದ್ದಾರೆ.

ಸಾದಾ ಪಿಸ್ತೂಲ್ಅನ್ನು ಎರಡೂ ಕೈಯಿಂದ ಹಿಡಿದು ಗುಂಡು ಹಾರಿಸಿರುವುದು, ಒಬ್ಬಾತ ತುಸು ಗೊಂದಲದಲ್ಲೇ ಎರಡು ಸಲ ಗುಂಡೇಟು ಹಾಕಿರುವುದು, ಮುಖ ಮುಚ್ಚಿಕೊಳ್ಳುವಂಥ ಪ್ರಯತ್ನ ನಡೆಸದೇ ಇರುವುದು, ಸಿಸಿ ಕ್ಯಾಮರಾ ಇರುವಲ್ಲೇ ಬಂದು ಕೃತ್ಯ ಎಸಗಿರುವುದು ಸೇರಿ ಕೆಲವು ಅಂಶಗಳನ್ನು ಪೊಲೀಸರು ಪರಿಶೀಲಿಸಿದಾಗ, ವೃತ್ತಿಪರ ಹಂತಕರಲ್ಲ ಎಂದು ಅಂದಾಜಿಸಿದ್ದಾರೆ.

# ಸರಗಳ್ಳತನ, ಹಫ್ತಾವಸೂಲಿ, ಮೂರು ಕೊಲೆಗಳಲ್ಲಿ ಇರ್ಫಾನ್ ಜಗಜ್ಜಾಹೀರು : 
ಧಾರವಾಡದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕುಖ್ಯಾತಿ ಗಳಿಸಿದ್ದ ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಆರಂಭದ ದಿನಗಳನ್ನು ಮೆಲಕು ಹಾಕಿದರೆ ಇವನೇನಾ ಫ್ರೂಟ್ ಎಂಬ ಅನುಮಾನ ಮೂಡಿಸುವುದು ಸಹಜ.

ಧಾರವಾಡದಲ್ಲಿ ಸಣ್ಣಪುಟ್ಟ ಸರ ಗಳ್ಳತನದಿಂದ ಆರಂಭವಾದ ಆತನ ಕರಾಳ ಜಗತ್ತಿನ ಹೆಜ್ಜೆ ಗುರುತು ಖೋಟಾ ನೋಟುಗಳ ವ್ಯವಹಾರದಿಂದ ಮತ್ತೊಂದು ಮಜಲು ಪಡೆದಿತ್ತು. ಆತನೇ ಆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾ ಗತಿಯಾಗುವ ಮೂಲಕ ಹಣ್ಣು ವ್ಯಾಪಾರ ಆರಂಭಿಸಿದ.

ಅಲ್ಲಿ ಕೂಡ ಸಣ್ಣ ಪುಟ್ಟ ಜಗಳ ಬಗೆಹರಿಸುವುದು, ಹಣ್ಣಿನ ಗಾಡಿ ಬಿಡುವುದು, ಹಪ್ತಾ ವಸೂಲಿ, ಸೆಟ್ಲಮೆಂಟ್ ಮಾಡುವುದು, ಹೀಗೆ ಶುರುವಾದ ಆತನ ರೌಡಿಸಂ ಮೀಟರ್ ಬಡ್ಡಿಗೆ ತಿರುಗಿತು.

ಅದಾದ ನಂತರವೇ ಇಮ್ತಿಯಾಜ್ ತಂಬೋಲಿ ಕೊಲೆ ಪ್ರಕರಣ, ಜಿದ್ದಿ ಮಲ್ಲಿಕ್ ಕೊಲೆ ಪ್ರಕರಣ ಹಾಗೂ ಹುಸೇನ್ ಬಿಜÁಪುರಿ ಕೊಲೆ ಪ್ರಕರಣಗಳಲ್ಲಿ ಇತನ ಹೆಸರುಗಳು ಕೇಳಿಬಂದವು.

ಪೊಲೀಸರಿಗೆ ವ್ಯವಹಾರ ಕುದುರಿಸುತ್ತಲೇ ತನ್ನ ಜಗತ್ತು ವಿಸ್ತಿರಿಸಿಕೊಂಡ ಈತ ದೊಡ್ಡ ಸಾಮಾಜ್ರ್ಯ ಕಟ್ಟಲು ಹೋದ. ತನ್ನ ಆದ ಕೋಟೆ ಕಟ್ಟಿ ಮೆರೆದಾಡಿದ. ಗಾಡಿ ಗೋಡಾಗಳನ್ನು ಇಟ್ಟುಕೊಂಡು ಹುಡುಗರ ಪಡೆ ಕಟ್ಟಿಅದನ್ನು ಮುಂದುವರೆಸಿದ. ಕೆಲ ಪೊಲೀಸರಜೊತೆಗೆ ಶಾಮೀಲಾಗಿ ಹಣದಿಂದಲೇ ಎಲ್ಲವನ್ನು ಆಟವಾಡಿಸುತ್ತಾ ಬಂದ ಇತನ ಮೇಲೆ ಹತ್ತು ಹಲವು ಜೀವ ಬೆದರಿಕೆ ಪ್ರಕರಣ, ಮೀಟರ್ ಬಡ್ಡಿ ಕಿರುಕುಳ ದೂರುಗಳು ಇದ್ದವು.

ಫ್ರೂಟ್ ಇರ್ಫಾನ್ ಹೆಸರು ಕೇಳಿದರೆ ಎಷ್ಟೋ ಜನ ನಮಗ್ಯಾಕೆ ಆತನ ಉಸಾಬರಿ ಎನ್ನುವಷ್ಟರ ಮಟ್ಟಿಗೆ ಹವಾ ಹೊಂದಿದ್ದ ಈತ ಕೋಟ್ಯಾಂತರ ರೂಪಾಯಿ ಆಸ್ತಿ ಪಾಸ್ತಿ ಮಾಡಿ, ಹಲವು ರೌಡಿಶೀಟರ್ ಗಳ ಜೊತೆಗೆ, ಮರಿ ಪುಢಾರಿ, ಸಂಘ-ಸಂಸ್ಥೆಗಳ ಮುಖಂಡರ, ರಾಜಕಾರಣಿಗಳ ಜೊತೆಗೆ ಕೂಡ ಒಡನಾಟ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.

ಫ್ರೂಟ್ ಇರ್ಫಾನ್ ಮೇಲೆ ಧಾರವಾಡದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಪ್ರಕರಣ, ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಮೀಟರ್ ಬಡ್ಡಿ ಕಿರುಕುಳ ಪ್ರಕರಣ, ಪೊಲೀಸ್ ಆಯುಕ್ತರಿಗೆ ಹಲವು ಬಿಲ್ಡರ್, ರಾಜಕಾರಣಿಗಳಿಗೆ ಜೀವ ಬೆದರಿಕೆ ಹಾಕಿದ ಕುರಿತು ಅನೇಕ ದೂರುಗಳಿದ್ದವು.

Facebook Comments

Sri Raghav

Admin