ಕೊರೋನಾದಿಂದ ಅನಾಥರಾದ ಮಕ್ಕಳ ಹೆಸರಲ್ಲಿ ಅನಧಿಕೃತವಾಗಿ ದೇಣಿಗೆ ಸಂಗ್ರಹಸುವವರ ಕಂಡರೆ ಮಾಹಿತಿ ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

ಕೋವಿಡ್-19ರ ಕಾರಣದಿಂದ ಪೋಷಕರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳನ್ನು ದತ್ತು ನೀಡಲಾಗುವುದೆಂದು ಸುಳ್ಳು ಮಾಹಿತಿಯು ಸಾಮಾಜಿಕ ಮಾದ್ಯಮದಲ್ಲಿ ಹರಿದಾಡುತ್ತಿದ್ದು, ಈ ರೀತಿಯ ಪ್ರಚಾರ ಮಾಡಿ ಅನಾಥ ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದೆ ಎಂದು ದೇಣಿಗೆ ಸಂಗ್ರಹ ಕೂಡ ಮಾಡಲಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.

ಇಂತಹ ಮೋಸಗಾರರು ಕಂಡುಬಂದರೆ ಕೂಡಲೇ ಮಕ್ಕಳ ಸಹಾಯವಾಣಿಯ ದೂರವಾಣಿ ಸಂಖ್ಯೆ 1098ನ್ನು ಸಂಪರ್ಕಿಸಿ ಇಲ್ಲವಾದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಮಕ್ಕಳ ಕಲ್ಯಾಣ ಸಮಿತಿಗಳನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕೃತ ವೆಬ್ ಸೈಟ್ www.icps.karnataka.gov.in ನ್ನು ಸಂಪರ್ಕಿಸಬಹುದಾಗಿದೆ.

ಈ ರೀತಿಯ ಅನಾಥ ಮಕ್ಕಳನ್ನು ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಸರ್ಕಾರಿ ಬಾಲಕರ ಬಾಲಮಂದಿರ ಮತ್ತು ಬಾಲಕಿಯರ ಬಾಲಮಂದಿರ ಹಾಗೂ ಶಿಶುಮಂದಿರವನ್ನು ಮತ್ತು ವಿಶೇಷ ದತ್ತು ಸಂಸ್ಥೆಗಳನ್ನು ಜಿಲ್ಲೆಗಳಲ್ಲಿ ನಡೆಸುತ್ತಿದ್ದು, ಮಕ್ಕಳಿಗೆ ಅವಶ್ಯವಿರುವ ಪಾಲನೆ ಮತ್ತು ರಕ್ಷಣೆಯನ್ನು ಒದಗಿಸಲಾಗುತ್ತಿದೆ.

ದತ್ತು ಪಡೆಯಬೇಕೆ:
ಸುಳ್ಳು ಪ್ರಚಾರಗಳಿಗೆ ಕಿವಿಗೊಡದೆ, ತಮ್ಮಲ್ಲಿ ಯಾರಿಗಾದರು ದತ್ತು ಪಡೆಯಲು ಇಚ್ಛೆ ಇದ್ದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್‍ಸೈಟ್ www.cara.nic.inನ್ನು ಸಂಪರ್ಕಿಸಬಹುದು. ಅಥವಾ ವಿಶೇಷ ದತ್ತು ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳನ್ನು ಕೂಡ ಸಂಪರ್ಕಿಸಬಹುದಾಗಿದೆ.
• ಯಾವುದೇ ಅನಾಥ, ಪರಿತ್ಯಕ್ತ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳನ್ನು ದತ್ತು ಪಡೆಯುವ ಮೊದಲು ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015 ಅಡಾಪ್ಷನ್ ರೆಗ್ಯುಲೇಷನ್ 2017 ನಿಯಮಾನುಸಾರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು.
• ನಂತರದಲ್ಲಿ ಮಕ್ಕಳನ್ನು ವಿಶೇಷ ದತ್ತು ಸಂಸ್ಥೆಗಳಿಗೆ ದಾಖಲು ಮಾಡಲಾಗುತ್ತದೆ.
• ನಿಯಮಾನುಸಾರ ಮಗುವಿಗೆ ಪೋಷಕರು ಯಾರು ಇಲ್ಲವೆಂದು ಖಾತ್ರಿಪಡಿಸಿಕೊಂಡ ನಂತರವಷ್ಟೇ ಮಗುವನ್ನು ವಿಶೇಷ ದತ್ತು ಸಂಸ್ಥೆಗಳ ಮೂಲಕ CARA ದಿಂದ ಈಗಾಗಲೇ ದತ್ತು ಪಡೆಯಲು ಇಚ್ಛಿಸಿ CARAದ CARINGS ವೆಬ್‍ಸೈಟ್‍ನಲ್ಲಿ ತಮ್ಮ ಹೆಸರುಗಳನ್ನ ನೋಂದಣಿ ಮಾಡಿಕೊಂಡ ದಂಪತಿಗಳಿಗೆ ದತ್ತು ನೀಡಲಾಗುತ್ತದೆ.

ಮಕ್ಕಳ ಮಾರಾಟ ಅಪರಾಧ:
ಈ ರೀತಿಯಲ್ಲಿ ದತ್ತು ಪಡೆಯದೆ ಬೇರೆ ಇನ್ನಾವುದೇ ರೀತಿಯಿಂದ ಮಗುವನ್ನು ದತ್ತು ಪಡೆದರೆ ಅದು ಕಾನೂನುಬಾಹಿರ ದತ್ತುವಾಗುತ್ತದೆ.

ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015ರ ಸೆಕ್ಷನ್ 81 ರನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು, ಮಗುವನ್ನು ಕೊಳ್ಳುವವರು ಹಾಗೂ ಮಾರುವವರು ಇಬ್ಬರಿಗೂ ರೂ. 1.00 ಲಕ್ಷ ದಂಡ ಹಾಗೂ 5 ವರ್ಷಗಳ ಸೆರಮನೆವಾಸವನ್ನು ವಿಧಿಸಲಾಗುವುದು.

ಆದ್ದರಿಂದ ಸುಳ್ಳು ಪ್ರಚಾರಗಳಿಗೆ ಕಿವಿಗೊಡದೆ ಈ ರೀತಿಯ ಅಪರಾಧಗಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯ ವಾಣಿ 1098 ಹಾಗೂ ಆಪ್ತಸಮಾಲೋಚನೆಗಾಗಿ 14499 ನ್ನು ಸಂಪರ್ಕಿಸುವಂತೆ ಮಕ್ಕಳ ರಕ್ಷಣಾ ನಿರ್ದೇಶಕರು ಕೋರಿದ್ದಾರೆ.

Facebook Comments

Sri Raghav

Admin