ಮಳೆ ಅನಾಹುತ ತಪ್ಪಿಸಲು ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.24-ಈ ಬಾರಿ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ತೊಂದರೆಯಾಗುವುದನ್ನು ತಪ್ಪಿಸಲು ವಾಟರ್ ಲೆವೆಲ್ ಸೆನ್ಸಾರ್ ಮತ್ತು ಉಪಗ್ರಹ ಆಧಾರಿತ ತಂತ್ರಜ್ಞಾನವನ್ನು ಬಳಸು ವುದಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೆ ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪರಮೇಶ್ವರ್ ಅವರು, ಮುಂಗಾರು ಮಳೆಯ ಅಬ್ಬರದಿಂದ ಪ್ರತಿ ಬಾರಿ ಬೆಂಗಳೂರಿಗೆ ಆಗುತ್ತಿರುವ ಅನಾಹುತಗಳನ್ನು ತಡೆಯಲು ಈ ಬಾರಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ರಾಜಕಾಲುವೆಗಳಲ್ಲಿ ವಾಟರ್ ಲೆವೆಲ್ ಸೆನ್ಸಾರ್ ಅಳವಡಿಸಲಾಗುವುದು, ಇದರಿಂದ ಕಾಲುವೆ ತುಂಬಿ ಹರಿಯುವ ಸಂದರ್ಭದಲ್ಲಿ ತಕ್ಷಣ ಕಂಟ್ರೋಲ್ ರೂಂಗೆ ಸಂದೇಶ ರವಾನೆಯಾಗಲಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುಂಬಿ ಹರಿಯುತ್ತಿರುವ ರಾಜಕಾಲುವೆಯಿಂದ ನೀರಿನ ಮಾರ್ಗ ಬದಲಾವಣೆ ಮಾಡಲು ಪ್ರಯತ್ನಿಸಲಿದ್ದಾರೆ ಎಂದು ಹೇಳಿದರು.

ತಗ್ಗು ಪ್ರದೇಶಗಳ ಮೇಲೆ ಉಪಗ್ರಹ ಆಧಾರಿತವಾಗಿ ನಿಗಾ ವಹಿಸಲಾಗುವುದು. ಬೆಂಗಳೂರಿನಲ್ಲಿ 1085 ಕಿಲೋಮೀಟರ್ ರಾಜಕಾಲುವೆಯನ್ನು ಸ್ವಚ್ಛಗೊಳಿಸಲಾಗಿದೆ. ಡಿಸೆಂಬರ್‍ನಿಂದ ಮಾರ್ಚ್‍ನೊಳಗೆ ಈ ಕಾಮಗಾರಿ ಚುರುಕಾಗಿ ಪೂರ್ಣಗೊಳಿಸಲಾಗಿದೆ.

ಜೊತೆಗೆ ಬೆಂಗಳೂರಿನಲ್ಲಿ 74 ಕೆರೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಈಗಾಗಲೇ 19 ಕೆರೆಗಳ ಹೂಳು ತೆಗೆಯಲಾಗಿದೆ. 31 ಕೆರೆಗಳಲ್ಲಿ ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿರುವ ಕೆರೆಗಳು ಹೂಳು ತುಂಬಿ ಮುಚ್ಚಿ ಹೋಗುತ್ತಿದ್ದರೂ ಅಧಿಕಾರಿಗಳು ಆ ಬಗ್ಗೆ ಗಮನಹರಿಸದಿರುವುದು ಏಕೆ ಎಂದು ಪರಮೇಶ್ವರ್ ತರಾಟೆಗೆ ತೆಗೆದುಕೊಂಡರು.

ಕಳೆದ ಹತ್ತನ್ನೆರಡು ವರ್ಷಗಳಿಂದ ಕೆರೆಗಳ ಅಭಿವೃದ್ಧಿಯೇ ಆಗಿಲ್ಲ. ರಾಜಕಾಲುವೆಯ ನೀರು ಹರಿದು ಎಲ್ಲಿ ಹೋಗಿ ನಿಲ್ಲಬೇಕು? ನೀರು ಹರಿಯಲು ಜಾಗವಿಲ್ಲದಿರುವುದರಿಂದ ಸಹಜವಾಗಿ ಅದು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲೂ ಈ ಸಮಸ್ಯೆ ಪುನರಾವರ್ತನೆ ಯಾಗುತ್ತಲೇ ಇದೆ.

ಆದರೂ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಬೆಂಗಳೂರಿನಲ್ಲಿರುವ ಬಿಬಿಎಂಪಿ ವಿಭಾಗೀಯ ಕಚೇರಿಗಳು ಏನು ಕೆಲಸ ಮಾಡುತ್ತಿವೆ. ಕೆರೆ ಹೂಳೆತ್ತಲು ಈವರೆಗೂ ಆ್ಯಕ್ಷನ್ ಪ್ಲ್ಯಾನ್ ಕೂಡ ಮಾಡಿಲ್ಲ. ಹಾಗಿದ್ದ ಮೇಲೆ ಅಧಿಕಾರಿಗಳು ಮಾಡುತ್ತಿರುವ ಕೆಲಸವಾದರೂ ಏನು ಪರಮೇಶ್ವರ್ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಮಳೆಗಾಲದಲ್ಲಿ ಮರಗಳು ಬೀಳುತ್ತಿರುವ ಬಗ್ಗೆ ಕೆಂಡಾಮಂಡಲರಾದ ಪರಮೇಶ್ವರ್, ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಮಳೆಗಾಲದಲ್ಲಿ ಮರಗಳು ಬೀಳುತ್ತಿವೆ. ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ, ಪ್ರಾಣ ಹಾನಿಯಾಗುತ್ತಿದೆ.

ಬಿಬಿಎಂಪಿ ಅರಣ್ಯ ಮತ್ತು ತೋಟಗಾರಿಕೆ ಅಧಿಕಾರಿಗಳು ಏನು ಮಾಡುತ್ತಿದ್ದೀರಾ? ನಿಮ್ಮನ್ನೆಲ್ಲ ಇಟ್ಟುಕೊಂಡಿರುವುದಾದರೂ ಯಾವ ಕಾರಣಕ್ಕೆ? ಬೆಂಗಳೂರಿನಲ್ಲಿ ನರ್ಸರಿಗಳನ್ನು ಅಭಿವೃದ್ಧಿ ಪಡಿಸಿ ಅರಣ್ಯ ಪ್ರದೇಶ ಹೆಚ್ಚು ಮಾಡಲೂ ಸಾಧ್ಯವಾಗಿಲ್ಲ. ಈಗ ಇರುವ ಮರಗಳ ನಿರ್ವಹಣೆಯೂ ಸರಿಯಾಗಿಲ್ಲ.

ರಸ್ತೆ ಬದಿಯ ಮರಗಳು ಮಳೆಗಾಲದಲ್ಲಿ ನಿರಂತರವಾಗಿ ಬೀಳುತ್ತಿವೆ. ಅವುಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಇನ್ನೇನು ಕೆಲಸ ಮಾಡಲು ಇದ್ದೀರಾ? ನಿಮ್ಮನ್ನು ಅರಣ್ಯ ಮತ್ತು ತೋಟಗಾರಿಕೆ ಮಾತೃ ಇಲಾಖೆಗೆ ವಾಪಸ್ ಕಳುಹಿಸುವುದೇ ಸೂಕ್ತ ಎಂದು ಸಿಡಿಮಿಡಿಗೊಂಡರು.

ಇನ್ನು ಮರ ಬಿದ್ದು ಆಗುವ ಸಾವುನೋವುಗಳಿಗೆ ಬಿಬಿಎಂಪಿಯಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಪ್ರತಿ ಬಾರಿಯೂ ರಸ್ತೆ ಗುಂಡಿಗಳದ್ದೇ ಸಮಸ್ಯೆ. ಈ ಬಾರಿ ಮಳೆಗಾಲಕ್ಕೂ ಮುನ್ನವೇ ಕಾಮಗಾರಿಗಳನ್ನು ಕೈಗೆತ್ತಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತದೆ. ಅದಕ್ಕಾಗಿ ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪಂಚಾಯತ್‍ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ