ಜಿ-20 ಶೃಂಗಸಭೆ : ಜಪಾನ್ ನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಒಸಾಕಾ, ಜೂ.27- ಮಹಿಳಾ ಸಬಲೀಕರಣ ಮತ್ತು ಕೃತಕ ಬುದ್ಧಿಮತ್ತೆಗೆ ಆದ್ಯತೆ ಹಾಗೂ ಭಯೋತ್ಪಾದನೆ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಉಪಕ್ರಮಗಳು ಸೇರಿದಂತೆ ಪ್ರಮುಖ ವಿಷಯಗಳನ್ನು ಜಿ-20 ಶೃಂಗಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉದಯರವಿ ನಾಡು ಜಪಾನ್‍ನ ಸುಂದರ ನಗರಿ ಒಸಾಕಾದಲ್ಲಿ ಇಂದಿನಿಂದ ಆರಂಭವಾಗಿರುವ ಮೂರು ದಿನಗಳ ಜಿ-20 ಶೃಂಗಸಭೆಗೆ ತೆರಳುವುದಕ್ಕೂ ಮುನ್ನ ಟ್ವೀಟರ್‍ನಲ್ಲಿ ಹೇಳಿಕೆ ನೀಡಿರುವ ಮೋದಿ ಈ ಮಹಾಸಭೆಯ ಪ್ರಾಮುಖ್ಯತೆ ಬಗ್ಗೆ ವಿವರಿಸಿದ್ದಾರೆ.

ಜಿ-20 ಶೃಂಗಸಭೆಯಲ್ಲಿ ಬಹು ಆಯಾಮಗಳ ವಿಷಯಗಳು ಪ್ರಮುಖವಾಗಿ ಚರ್ಚೆಯಾಗಲಿದ್ದು, ಎಲ್ಲ 20 ಸದಸ್ಯ ದೇಶಗಳು ಇವುಗಳ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿ ಸಮಾಲೋಚಿಸಲಿವೆ. ಈ ಶೃಂಗಸಭೆಯು ಜ್ವಲಂತ ಸಮಸ್ಯೆಗಳ ಬಗ್ಗೆ ಅತಿ ಮುಖ್ಯವಾಗಿ ಚರ್ಚಿಸಿ ಅವುಗಳಿಗೆ ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸಿವೆ. ಇವುಗಳ ಬಗ್ಗೆ ಜಿ-20 ರಾಷ್ಟ್ರಗಳು ಸಮಾನ ಮನಸ್ಸಿನಿಂದ ಚರ್ಚಿಸಿ ಮಾರ್ಗೋಪಾಯಗಳನ್ನು ಹುಡುಕಲಿವೆ ಎಂದರು. ಕಳೆದ ಐದು ವರ್ಷಗಳಲ್ಲಿ ಭಾರತದ ಸದೃಢ ಅಭಿವೃದ್ಧಿ ಅನುಭವಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಂಚಿಕೊಳ್ಳಲು ಇದು ನಮಗೆ ಉತ್ತಮ ಅವಕಾಶ ಕಲ್ಪಿಸಿದೆ.

ಅಲ್ಲದೆ, ಪ್ರಗತಿ ಮತ್ತು ನಿರಂತರ ಸುಸ್ಥಿರತೆ ಹಾದಿಯಲ್ಲಿ ಸಾಗಲು ನಮ್ಮ ಅನುಭವಗಳನ್ನು ಜಿ-20 ಶೃಂಗಸಭೆಯಲ್ಲಿ ವಿನಿಮಯ ಮಾಡಿಕೊಂಡು ಮತ್ತಷ್ಟು ಪ್ರಗತಿಗೆ ಸಾಕಾರಗೊಳ್ಳುವ ಯತ್ನಗಳಿಗೂ ಇದು ಪೂರಕವಾಗಲಿದೆ ಎಂದು ಮೋದಿ ಬಣ್ಣಿಸಿದ್ದಾರೆ.

ಮೋದಿಯವರು ಶೃಂಗಸಭೆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಸೇರಿದಂತೆ ಅನೇಕ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಕುರಿತು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‍ಕುಮಾರ್ ಟ್ವಿಟ್ ಮಾಡಿದ್ದಾರೆ.

ಮೋದಿಗೆ ಭವ್ಯ ಸ್ವಾಗತ: ಇಂದು ಬೆಳಗ್ಗೆ ಒಸಾಕಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮುದಾಯ ಸೇರಿದಂತೆ ಸ್ಥಳೀಯ ಉನ್ನತ ನಾಯಕರು ಅದ್ಧೂರಿ ಸ್ವಾಗತ ಕೋರಿದರು.

ಮೋದಿ ಬರುವುದಕ್ಕೆ ಮುನ್ನವೇ ಒಸಾಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದ ಭಾರತೀಯ ಸಮುದಾಯದವರು ಪ್ರಧಾನಿ ಬಂದಿಳಿಯುತ್ತಿದ್ದಂತೆ ಜಯಘೋಷ ಮೊಳಗಿಸಿದರು.

ಉದಯರವಿ ನಾಡಿನಲ್ಲಿ ನೆಲೆಸಿರುವ ಭಾರತೀಯರಿಗೆ ಮೋದಿ ಆಗಮನ ವಿಶೇಷ ಸಂತಸ ಮೂಡಿಸಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಭಾರತೀಯರು ಏರ್‍ಪೆÇೀರ್ಟ್ ರಸ್ತೆಯ ಇಕ್ಕೆಲಗಳಲ್ಲಿ ಸೇರಿ ಮೋದಿ ಅವರತ್ತ ಕೈ ಬೀಸಿ ವಿಜಯ ಸಂಕೇತ ಸೂಚಿಸುತ್ತ ಅಭಿನಂದನೆ ಸಲ್ಲಿಸಿ ಸ್ವಾಗತ ಕೋರಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ