ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಜೊತೆ ಸಿಎಂ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.16-ನೆನೆಗುದಿಗೆ ಬಿದ್ದಿದ್ದ ರಾಜ್ಯದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಕೇಂದ್ರ ಜಲಸಂಪನ್ಮೂಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಮಾತುಕತೆ ನಡೆಸಿದರು. ಕುಮಾರಕೃಪ ಅತಿಥಿ ಗೃಹದಲ್ಲಿ ಶೇಖಾವತ್ ಅವರನ್ನು ಭೇಟಿಯಾದ ಮುಖ್ಯಮಂತ್ರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಾಥ್ ನೀಡಿದರು.

ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಉಭಯ ನಾಯಕರ ನಡುವೆ ರಾಜ್ಯದ ನೀರಾವರಿ ವಿಷಯಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ.  ಕಾವೇರಿ ಮತ್ತು ಕೃಷ್ಣಾ ಕೊಳ್ಳದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಹಾಗೂ ಹೊಸದಾಗಿ ಕಾಮಗಾರಿ ಆರಂಭಿಸುವ ಬಗ್ಗೆಯೂ ಮುಖ್ಯಮಂತ್ರಿ ಕೇಂದ್ರ ಸಚಿವರಿಂದ ಮಾಹಿತಿ ಪಡೆದರು.
ಮುಖ್ಯವಾಗಿ ಕಾವೇರಿ ನದಿಗೆ ಅಡ್ಡಲಾಗಿ ಹೊಗೆನಕಲ್ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕುಡಿಯುವ ನೀರು ಯೋಜನೆ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ.

ಈ ಯೋಜನೆಗೆ ತಮಿಳುನಾಡು ಸರ್ಕಾರ ಪದೇ ಪದೇ ಅಡ್ಡಿಪಡಿಸುತ್ತಿರುವುದರಿಂದ ಕಾನೂನು ವ್ಯಾಪ್ತಿಯೊಳಗೆ ಸಮಸ್ಯೆ ಪರಿಹರಿಸುವ ಬಗ್ಗೆಯೂ ಕೇಂದ್ರ ಸಚಿವರಿಂದ ಮಾಹಿತಿ ಪಡೆದರು. ಇದೊಂದು ಕುಡಿಯುವ ನೀರಿನ ಯೋಜನೆಯಾಗಿದ್ದು ತಮಿಳುನಾಡು ಅಡ್ಡಿಪಡಿಸುವುದು ಸರಿಯಲ್ಲ. ಆದಷ್ಟು ಶೀಘ್ರ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಬಿಎಸ್‍ವೈ ಮನವಿ ಮಾಡಿದರು.

ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ಕಳಸಾ-ಬಂಡೂರಿ ನಾಲಾ ಯೋಜನೆಗೆ ಶೀಘ್ರದಲ್ಲಿ ಅನುಮತಿ ಕೊಡಿಸುವಂತೆಯೂ ಯಡಿಯೂರಪ್ಪ ಪ್ರಸ್ತಾವನೆ ಸಲ್ಲಿಸಿದ್ದಾರೆ.  ಮೂರು ಜಿಲ್ಲೆಗಳ ಶಾಶ್ವತವಾಗಿ ಕುಡಿಯುವ ನೀರು ಯೋಜನೆ ಇದಾಗಿದ್ದು, ಗೋವಾ ರಾಜ್ಯ ಅನಗತ್ಯವಾಗಿ ತಗಾದೆ ತೆಗೆದಿದೆ.

ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಈಗಾಗಲೇ ಯೋಜನೆಯ ಕಾಮಗಾರಿ ಆರಂಭಿಸುವಂತೆ ಅನುಮತಿ ನೀಡಿದೆ. ಆದರೂ ಗೋವಾ ರಾಜ್ಯ ಯೋಜನೆಗೆ ಒಪ್ಪಿಗೆ ನೀಡಬಾರದೆಂದು ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆ. ನಾವು ಎಲ್ಲಿ ಯೂ ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಆರಂಭಿಸುವುದಕ್ಕೆ ನ್ಯಾಯಾಧೀಕರಣದಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದೇವೆ.

ಆದಾಗ್ಯೂ ಗೋವಾ ಸರ್ಕಾರ ಯೋಜನೆಗೆ ಅಡ್ಡಿಪಡಿಸುತ್ತಿದೆ. ಇದೊಂದು ಬಹುಮುಖ್ಯವಾದ ಯೋಜನೆಯಾಗಿರುವುದರಿಂದ ಅನುಮತಿ ಕೊಡಿಸುವಂತೆಯೂ ಕೋರಿದರು.
ಬಳಿಕ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು ಎಂದು ತಿಳಿದುಬಂದಿದೆ.

Facebook Comments