ಗಾಲ್ವಾನ್ ಕಣಿವೆಯಿಂದ 1.5ಕಿ.ಮೀ. ಹಿಂದೆ ಸರಿದ ಚೀನಾ ಸೇನೆ, ಶಿಬಿರಗಳು ಎತ್ತಂಗಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಗಾಲ್ವಾನ್ ಕಣಿವೆ, ಜು.6- ಪೂರ್ವ ಲಡಾಖ್‍ನ ಗಾಲ್ವಾನ್ ಕಣಿವೆ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಭಾರತ-ಚೀನಾ ನಡುವೆ ಉದ್ಭವಿಸಿದ್ದ ಕದನ ಕಾರ್ಮೋಡ ಭೀತಿ ತಿಳಿಯಾಗುವ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗಿವೆ.

ಗಾಲ್ವಾನ್ ಕಣಿವೆಯ ಸೂಕ್ಷ್ಮ ಪ್ರದೇಶಗಳಿಂದ ಚೀನಾ ಸೇನಾಪಡೆ 1.5ಕಿ.ಮೀ.ನಷ್ಟು ಹಿಂದೆ ಸರಿದಿದೆ. ಅಲ್ಲದೆ, ಅನೇಕ ಪ್ರದೇಶಗಳಲ್ಲಿ ಜಮಾವಣೆಗೊಂಡಿದ್ದ ಮಿಲಿಟರಿ ಶಿಬಿರಗಳು ಮತ್ತು ಸೇನಾ ವಾಹನಗಳು ತೆರವುಗೊಳ್ಳುತ್ತಿವೆ.

ಇದರಿಂದಾಗಿ ವಿಶ್ವಾದ್ಯಂತ ಇಂಡೋ-ಚೀನಾ ಯುದ್ಧದ ಬಗ್ಗೆ ಕವಿದಿದ್ದ ಕಾರ್ಮೋಡಗಳು ಚದುರಿಹೋಗಿವೆ. ಕಳೆದ ವಾರದಿಂದಲೂ ಇಂಡೋ-ಚೀನಾ ಉನ್ನತ ಸೇನಾಧಿಕಾರಿಗಳ ನಡುವೆ ಸತತ ದೀರ್ಘಾವಧಿ ಮಾತುಕತೆ ಫಲಶೃತಿಯಾಗಿ ಗಾಲ್ವಾನ್ ಕಣಿವೆಯಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಸೇನಾಪಡೆಗಳು ಇಂದು ಮುಂಜಾನೆಯಿಂದಲೇ ಹಿಂದೆ ಸರಿಯಲು ಆರಂಭಿಸಿವೆ.

ಗಾಲ್ವಾನ್ ಕಣಿವೆಯ ಪ್ಯಾಟ್ರೋಲಿಂಗ್ ಪಾಯಿಂಟ್ 14, ಗೋಗ್ರಾ ಹಾಟ್‍ಸ್ಪ್ರಿಂಗ್ ಪ್ರದೇಶಗಳಿಂದ ಚೀನಾ ಸೇನಾಪಡೆಗಳ ಶಿಬಿರಗಳನ್ನು ತೆರವುಗೊಳಿಸಲಾಗುತ್ತಿದೆ. ಅಲ್ಲದೆ, ಅನೇಕ ಅಗಾಧ ವಾಹನಗಳು ಮತ್ತು ಯುದ್ಧಾಸ್ತ್ರಗಳು ಹಿಂದೆ ಸರಿಯುತ್ತಿವೆ. ಒಟ್ಟಾರೆ ಚೀನಾ ಸೇನಾಪಡೆ 1 ರಿಂದ 1.5ಕಿ.ಮೀ.ನಷ್ಟು ಹಿಂದೆ ಸರಿದಿವೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

# ಪ್ರತಿಕೂಲ ಹವಾಮಾನ- ರಕ್ಷಣೆಗೆ ಕ್ರಮ:
ಈ ಮಧ್ಯೆ ಪೂರ್ವ ಲಡಾಖ್ ಸೇರಿದಂತೆ ಇಂಡೋ-ಚೀನಾ ಗಡಿ ಭಾಗದಲ್ಲಿ ಪ್ರತಿಕೂಲ ಹವಾಮಾನ, ಹಿಮಪಾತ, ಭಾರೀ ಮಳೆಯಿಂದಾಗಿ ಭಾರತೀಯ ಸೇನಾಪಡೆಗಳಿಗೆ ಅಗತ್ಯ ರಕ್ಷಣೆ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಪ್ರಕೃತಿ ವಿಕೋಪ ಎದುರಿಸಲು ಅಗತ್ಯವಾದ ಎಲ್ಲ ಸಾಧನ-ಸಲಕರಣೆಗಳು ಮತ್ತು ಉತ್ತಮ ಸಮವಸ್ತ್ರಗಳನ್ನು ಗಡಿಭಾಗದ ಭಾರತೀಯ ಸೇನೆಗೆ ಪೂರೈಸಲಾಗಿದೆ.

# ಪ್ರೆಡಿಟರ್ ಬಿ ಪ್ಲಾನ್:
ಏತನ್ಮಧ್ಯೆ ಚೀನಾ-ಪಾಕ್ ಗಡಿಯಲ್ಲಿ ತನ್ನ ಸೇನಾಪಡೆಗೆ ರಕ್ಷಣೆ ನೀಡಲು ಚೀನಾ ಇಸ್ಲಮಾಬಾದ್‍ಗೆ ನಾಲ್ಕು ಕ್ಷಿಪಣಿಗಳನ್ನು ರವಾನಿಸಿದೆ.  ಅಲ್ಲದೆ, ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಗದ್ವಾರ್ ಬಂದರಿನಲ್ಲಿ ಲಂಗರು ಹಾಕಿರುವ ತನ್ನ ನೌಕಾಪಡೆಗೆ ಹೆಚ್ಚುವರಿ ಭದ್ರತೆಯನ್ನು ಚೀನಾ ಒದಗಿಸಿದೆ.

ಇದಕ್ಕೆ ಪ್ರತಿಯಾಗಿ ಭಾರತ ಚೀನಾದಿಂದ ಎದುರಾಗಬಹುದಾದ ಯಾವುದೇ ಉಪಟಳ ಎದುರಿಸಲು ತನ್ನ ಮಿಲಿಟರಿ ಕಾರ್ಯಯೋಜನೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು (ಪ್ರೆಡಿಟರ್ ಬಿ ಪ್ಲಾನ್- ವೈರಿ ದಾಳಿ ನಿಗ್ರಹ ಯೋಜನೆ) ಕ್ರಮ ಕೈಗೊಂಡಿದೆ.

Facebook Comments