‘ಖರ್ಗೆ ಸಿಎಂ ಆಗ್ಬೇಕಿತ್ತು’ ಎಂಬ ಎಚ್‍ಡಿಕೆ ಹೇಳಿಕೆ ಹಿಂದಿದೆ ಹೊಸ ‘ಪೊಲಿಟಿಕಲ್ ಗೇಮ್’..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 16-ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಹೇಳಿಕೆ ನೀಡುವ ಮೂಲಕ ಜೆಡಿಎಸ್ ನಾಯಕರಿಗೆ ಇರಿಸು-ಮುರಿಸು ಉಂಟು ಮಾಡುತ್ತಿದ್ದ ಬೆಂಬಲಿಗರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸುವ ಮೂಲಕ ಟಕ್ಕರ್ ನೀಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಸರ್ಕಾರದಿಂದ ದೂರವೇ ಉಳಿದಿದ್ದಾರೆ.

ಆದರೂ ಜೆಡಿಎಸ್ ನಾಯಕರು ಖರ್ಗೆ ಅವರನ್ನು ಮುಖ್ಯಮಂತ್ರಿ ಹುದ್ದೆಯ ಚರ್ಚೆಗೆ ಎಳೆದು ತರುವ ಮೂಲಕ ಒಳಗೊಳಗೇ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಮತ್ತೊಂದು ಸುತ್ತು ಸಿದ್ಧವಾಗಿದ್ದಾರೆ.

ಕುಂದಗೋಳ ಉಪಚುನಾವಣಾ ಕಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಮುಂದಿನ ದಿನಗಳಲ್ಲಿ ರಾಜಕೀಯ ಸುಂಟರಗಾಳಿಯನ್ನು ಎಬ್ಬಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಸಿದ್ದರಾಮಯ್ಯ ಅವರ ಬೆಂಬಲಿಗರು ಮುಖ್ಯಮಂತ್ರಿ ಹುದ್ದೆಗೆ ಸಿದ್ದು ಅವರೇ ಸೂಕ್ತ ಎಂದು ಹೇಳಿಕೆ ನೀಡುತ್ತಲೇ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಸುನಾಮಿ ಸೃಷ್ಟಿಸುವ ಕೆಲಸ ಮಾಡಿದರು. ಹೈಕಮಾಂಡ್ ಮಧ್ಯಪ್ರವೇಶಿಸಿ ಅದಕ್ಕೆ ಕಡಿವಾಣ ಹಾಕಿತ್ತು.

ಕಾಂಗ್ರೆಸ್ ಶಾಸಕರ ಹೇಳಿಕೆಗಳಿಂದ ಸಹನೆ ಕಳೆದುಕೊಂಡ ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಹಾಗೂ ಇತರ ನಾಯಕರು ಬಹಿರಂಗ ವಾಕ್ಸಮರವನ್ನೇ ನಡೆಸಿದರು.

ಇದಕ್ಕೆ ಎದುರು ನಿಂತು ಸಿದ್ದರಾಮಯ್ಯ ಪ್ರತಿ ವಾಗ್ದಾಳಿ ನಡೆಸುವ ಮೂಲಕ ತಮ್ಮ ಬೆಂಬಲಿಗರ ಹೇಳಿಕೆಗಳನ್ನು ಸಮರ್ಥಿಸಿಕೊಂಡರು.

ರಾಜಕೀಯದಲ್ಲಿ ಸಿದ್ದರಾಮಯ್ಯ ಅವರನ್ನು ಸರ್ವಾಧಿಕಾರಿ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜರಿಯಲಾರಂಭಿಸಿದರು. ಕಾಂಗ್ರೆಸ್‍ನಲ್ಲೂ ಕೆಲವರಲ್ಲಿ ಇದೇ ಭಾವನೆ ಇದ್ದರೂ ಯಾರೂ ಬಹಿರಂಗವಾಗಿ ಹೇಳಿಕೊಳ್ಳಲಾಗದೆ ಕೈ ಕೈ ಹಿಸುಕಿಕೊಳ್ಳಲಾರಂಭಿಸಿದರು.

ಸಿದ್ದರಾಮಯ್ಯ ಅವರನ್ನು ಬಿಟ್ಟರೆ ರಾಜ್ಯ ಕಾಂಗ್ರೆಸ್‍ನಲ್ಲಿ ಪರ್ಯಾಯ ನಾಯಕರೇ ಇಲ್ಲವೆಂಬಂತೆ ಬಿಂಬಿಸಲಾಗುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಅವರು ಆಗಾಗ್ಗೆ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದರಾದರೂ ಸೆಡ್ಡು ಹೊಡೆದು ಎದುರು ನಿಲ್ಲುವ ರಾಜಕಾರಣ ಮಾಡುತ್ತಿಲ್ಲ.

ಇನ್ನು ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಗಳು ಸಿದ್ದು ನಾಯಕತ್ವವನ್ನು ಪ್ರಶ್ನೆ ಮಾಡಲಾಗದ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.  ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಮತ್ತಿತರರು ಸಿದ್ದು ವೇಗಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸುತ್ತಿದ್ದರಾದರೂ ಅದು ಗರಿಷ್ಠ ಮಟ್ಟದಲ್ಲಿಲ್ಲ.

ರಾಜ್ಯ ರಾಜಕಾರಣದಲ್ಲಿ ಸದ್ಯದ ಮಟ್ಟಿಗೆ ಪ್ರಭಾವಿ ಎನಿಸಿಕೊಂಡು ಪ್ರಧಾನಿ ಹುದ್ದೆಯ ರೇಸಿನಲ್ಲೂ ಇರುವ ಮಲ್ಲಿಕಾರ್ಜುನ ಖರ್ಗೆ ಅವರಿಂದ ಮಾತ್ರ ಸಿದ್ದರಾಮಯ್ಯ ಅವರ ಪ್ರಭಾವವನ್ನು ಹತ್ತಿಕ್ಕಲು ಸಾಧ್ಯ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದರೂ ಅವಕಾಶವಂಚಿತ ಎಂಬ ಅನುಕಂಪಕ್ಕೆ ಗುರಿಯಾಗಿದ್ದಾರೆ. ಮೂಲ ಕಾಂಗ್ರೆಸ್ಸಿಗ, ಹಿರಿಯ ಮುತ್ಸದ್ಧಿ ಎಂಬ ಹಿರಿಮೆಗಳು ಅವರಿಗಿದೆ.

2013ರಲ್ಲಿ ಸಿದ್ದರಾಮಯ್ಯ ಅವರಿಂದಾಗಿಯೇ ಖರ್ಗೆ ಮುಖ್ಯಮಂತ್ರಿಗಾದಿಯಿಂದ ವಂಚಿತರಾದರು. 2018ರ ವಿಧಾನಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ರಚನೆ ವೇಳೆ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ನಾನು ಹೇಳಿದ್ದೆ.

ಆದರೆ ಕಾಂಗ್ರೆಸ್ಸಿಗರೇ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯಿಸಿದ್ದರು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹೇಳಿಕೆ ನೀಡಿದ್ದರು. ಅದು ಅಷ್ಟೇನೂ ಚರ್ಚೆಗೆ ಗ್ರಾಸವಾಗಲಿಲ್ಲ.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಎಂಬ ಹೇಳಿಕೆಗಳು ವ್ಯಾಪಕವಾದಾಗ ಇದಕ್ಕೆ ಪರ್ಯಾಯ ಹುಡುಕುತ್ತಿದ್ದವರಿಗೆ ಈಗ ಕಂಡುಬಂದಿದ್ದು ಖರ್ಗೆ ಅವರು. ಹಾಗಾಗಿಯೇ ಚಿಂಚೋಳಿ ವಿಧಾನಸಭೆ ಉಪಚುನಾವಣಾ ಕಣದಲ್ಲಿ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದಲ್ಲಿ ಖರ್ಗೆಯವರು ಮುಖ್ಯಮಂತ್ರಿಯಾಗಬೇಕಿತ್ತು ಎಂದು ಹೇಳಿ ಚರ್ಚೆಗೆ ಹೊಸ ದಿಕ್ಕು ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮೈಸೂರು ಮತ್ತು ಕಲಬುರಗಿ ಕ್ಷೇತ್ರಗಳ ಫಲಿತಾಂಶ ಮುಂದಿನ ಮುಖ್ಯಮಂತ್ರಿ ಹುದ್ದೆಯ ಚರ್ಚೆಯ ನಿಟ್ಟಿನಲ್ಲಿ ಪ್ರಮುಖ ಎನಿಸಿದೆ.

ಸಚಿವ ಜಿ.ಟಿ.ದೇವೇಗೌಡ ಅವರ ಹೇಳಿಕೆ ನೋಡಿದರೆ ಮೈಸೂರು ಕ್ಷೇತ್ರದ ಫಲಿತಾಂಶದ ಬಗ್ಗೆ ಕಾಂಗ್ರೆಸ್‍ನಲ್ಲೇ ಅನುಮಾನಗಳಿವೆ. ಕಲಬುರಗಿ ಮತ್ತು ಮೈಸೂರು ಎರಡೂ ಕಡೆ ಕಾಂಗ್ರೆಸ್‍ಗೆ ಸೋಲುಂಟಾದರೆ ನಾಯಕತ್ವದ ಹಗ್ಗಜಗ್ಗಾಟದಲ್ಲಿ ಸಮಬಲ ಉಂಟಾಗುತ್ತದೆ.

ಒಂದು ವೇಳೆ ಕಲಬುರಗಿಯಲ್ಲಿ ಕಾಂಗ್ರೆಸ್ ಗೆದ್ದು, ಮೈಸೂರಿನಲ್ಲಿ ಹಿನ್ನಡೆಯಾದರೆ ಸಿದ್ದು ಬೆಂಬಲಿಗರ ದನಿ ಕ್ಷೀಣವಾಗಲಿದೆ. ಇದೇ ಅವಕಾಶಕ್ಕಾಗಿ ಕಾಯುತ್ತಿರುವ ಸಿದ್ದು ವಿರೋಧಿಗಳು ಖರ್ಗೆ ಅವರನ್ನು ಮುನ್ನೆಲೆಗೆ ತಂದು ಸಿದ್ದು ಅವರನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆಸಿದಂತಿದೆ.

ಒಂದು ವೇಳೆ ಸಿದ್ದರಾಮಯ್ಯ ಅವರು ರೊಚ್ಚಿಗೆದ್ದು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಮುಂದಾದರೆ ಎಂಬ ಪ್ರಶ್ನೆಗಳಿಗೂ ಕಾಂಗ್ರೆಸ್- ಜೆಡಿಎಸ್ ನಾಯಕರ ನಡುವೆ ಚರ್ಚೆಗಳು ನಡೆದಿದ್ದು, ರಕ್ಷಣಾತ್ಮಕ ರಾಜಕೀಯ ವ್ಯೂಹವೂ ರಚನೆಯಾಗುತ್ತಿದೆ. ಹೀಗಾಗಿಯೇ ಖರ್ಗೆ ಬೆಂಬಲಿಗರಿಗೆ ಧ್ವನಿಕೊಡಲು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin