ಗಂಧದ ಗುಡಿ ಸೇರಿ ಅಣ್ಣಾವ್ರ ಹಿಟ್ ಚಿತ್ರಗಳ ನಿರ್ದೇಶಕ ವಿಜಯ್ ರೆಡ್ಡಿ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10- ಚಿತ್ರರಂಗದ ಹಿರಿಯ ಅನುಭವಿ ನಿರ್ದೇಶಕ ವಿಜಯ್ ರೆಡ್ಡಿ ವಿವಶರಾಗಿದ್ದಾರೆ. 84 ವರ್ಷದ ಈ ಹಿರಿಯ ಜೀವ ಚೆನ್ನೈನ ಅಪೋಲೋ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.

ಆಂಧ್ರ ಮೂಲದ ವಿಜಯಾರೆಡ್ಡಿ ಕನ್ನಡದ ಚಿತ್ರರಂಗದಲ್ಲಿ ವಿಜಯ್ ಎಂದೇ ಹೆಸರಾಗಿದ್ದವರು. ರೈತ ಕುಟುಂಬದಿಂದ ಬಂದಂತಹ ವಿಜಯ್ ರೆಡ್ಡಿ ಕೆಲಸ ಅರಸುತ್ತಾ ಮದರಾಸಿಗೆ ಹೋಗಿ ಯಶಸ್ವೀ ನಿರ್ದೇಶಕ, ನಿರ್ಮಾಪಕರಾಗಿ ಬೆಳೆದರು.

ಕನ್ನಡದಲ್ಲಿ ಸುಮಾರು 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ವಿಜಯ್ ಭಕ್ತಿ ಪ್ರದಾನ , ಐತಿಹಾಸಿಕ ಹಾಗೂ ಸಾಮಾಜಿಕ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡವರು. ಅವರ ಹೆಸರಿನಲ್ಲಿ ಯಶಸ್ವೀ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಶ್ರೀನಿವಾಸ ಕಲ್ಯಾಣ , ಮಯೂರ , ನಾ ನಿನ್ನ ಮರೆಯಲಾರೆ , ಗಂಧದ ಗುಡಿ , ಸನಾದಿ ಅಪ್ಪಣ್ಣ , ಭಕ್ತ ಪ್ರಹ್ಲಾದ , ಹುಲಿಯ ಹಾಲಿನ ಮೇವು , ಬಡವರ ಬಂಧು , ತಾಳಿಯ ಭಾಗ್ಯ , ಕೌಬಾಯ್ ಕುಳ್ಳ , ನಾನಿನ್ನ ಬಿಡಲಾರೆ , ಆಟೋ ರಾಜ , ದೇವ , ಪರಶುರಾಮ ಸೇರಿದಂತೆ 16 ಹಿಂದಿ , 12 ತೆಲುಗು ಸಿನಿಮಾಗಳನ್ನು ನಿರ್ದೇಶಿಸಿದ್ದು , ಚಿತ್ರ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ.

ದಶಕಗಳ ಕಾಲ ಮನ ಮುಟ್ಟುವಂಥ ಚಿತ್ರವನ್ನು ನಿರ್ದೇಶಿಸಿದ ವಿಜಯ್ ರೆಡ್ಡಿ ಅವರು ಇಳಿ ವಯಸ್ಸಿನಲ್ಲೂ ಪ್ರಸಿದ್ಧ ಸೀರಿಯಲ್ ಗಳನ್ನು ನಿರ್ದೇಶಿಸಿದರು. ಶ್ರೀ ವೆಂಕಟೇಶ್ವರ ಮಹಿಮೆ ಎಂಬ ಸೀರಿಯಲ್ ಅನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರಾಮೋಜಿ ಫಿಲ್ಮï ಸ್ಟುಡಿಯೋದಲ್ಲಿ ಚಿತ್ರಿಸಿದ್ದು ವಿಶೇಷವಾಗಿತ್ತು.

ಬಹಳ ಸಜ್ಜನಿಕೆ , ಸರಳ , ವ್ಯಕ್ತಿಯಾಗಿದ್ದ ವಿಜಯ್ ರೆಡ್ಡಿ ಹಲವಾರು ಕೊಡುಗೆಯನ್ನು ಚಿತ್ರಂಗಕ್ಕೆ ನೀಡಿದ್ದು , ಬಹಳಷ್ಟು ನಿರ್ದೇಶಕರು ಇವರ ಗರಡಿಯಲ್ಲಿ ಪಳಗಿದ್ದಾರೆ. ಅದೇ ರೀತಿ ಬಹುತೇಕ ತಾರೆಯರ ಯಶಸ್ಸಿಗೆ ಕಾರಣಕರ್ತರು ಆಗಿದ್ದಾರೆ. ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಈ ಹಿರಿಯ ಜೀವಿ ಅಗಲಿಕೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ , ಚಲನಚಿತ್ರ ಕಲಾವಿದರು , ತಂತ್ರಜ್ಞರು ಹಾಗೂ ಕಾರ್ಮಿಕರು ಸೇರಿದಂತೆ ಇಡೀ ಚಿತ್ರೋದ್ಯಮವೇ ಸಂತಾಪ ವ್ಯಕ್ತಪಡಿಸಿದೆ.

Facebook Comments

Sri Raghav

Admin