‘ಗಂಧದ ಗುಡಿ’ ಟೀಸರ್ ಬಿಡುಗಡೆಗೆ ಸಿಎಂಗೆ ಆಹ್ವಾನ ನೀಡಿದ ಶಿವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4-ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕನಸಿನ ಯೋಜನೆಯಾದ ಗಂಧದಗುಡಿ ಟೀಸರ್ ಬಿಡುಗಡೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದಾರೆ.

ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸಕ್ಕೆ ನಟ ಶಿವರಾಜ್‍ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‍ಕುಮಾರ್ ಅವರ ಜೊತೆ ಆಗಮಿಸಿದ ಅವರು, ಡಿ.6ರಂದು ಗಂಧದಗುಡಿ ಟೀಸರ್ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಸಿಎಂ ಬೊಮ್ಮಾಯಿ ಅವರು, ಡಿ.6ರಂದು ತಾವು ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಗಂಧದಗುಡಿ ಟೀಸರ್ ಪುನೀತ್ ರಾಜ್‍ಕುಮಾರ್ ಅವರ ಕನಸಿನ ಯೋಜನೆಯಾಗಿತ್ತು.

ಕರ್ನಾಟಕ ರಾಜ್ಯೋತ್ಸವದ ದಿನವಾದ ನ.1ರಂದು ಇದನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದರು. ಹೀಗಾಗಿಯೇ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ರಾಜ್ಯೋತ್ಸವದ ದಿನದಂದೇ ಲೋಕಾರ್ಪಣೆ ಮಾಡಬೇಕೆಂದು ಮನವಿ ಮಾಡಿದ್ದರು.

ಇದಕ್ಕೆ ಸಿಎಂ ಸಹ ಸಮ್ಮತಿಸಿದ್ದರು. ನಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎಂಬಂತೆ ಗಂಧದ ಗುಡಿ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಪೂರ್ವ ಸಿದ್ದತೆ ಆರಂಭಿಸಿದ್ದ ಪುನೀತ್ ರಾಜ್‍ಕುಮಾರ್ ಹಠಾತ್ ನಿಧನರಾಗಿದ್ದರಿಂದ ಈ ಯೋಜನೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು.

ಇದೀಗ ಕಿರಿಯ ಸಹೋದರನ ಕನಸಿನ ಯೋಜನೆಯನ್ನು ನನಸು ಮಾಡಲು ಸಹೋದರರು ಮುಂದಾಗಿದ್ದಾರೆ.

Facebook Comments