ಕಾಮಗಾರಿ ಮಾಡದೆ ಬಿಲ್ ಪಾವತಿ, ಆಡಳಿತಾಧಿಕಾರಿಗೆ ರಮೇಶ್ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.25-ಕೆಲಸ ಮಾಡದೆ ನಕಲಿ ಬಿಲ್ ಸೃಷ್ಟಿಸಿ ಒಂದು ಕೋಟಿ ಬಿಲ್ ಪಡೆದು ವಂಚಿಸಿರುವ ದ್ವೀತಿಯ ದರ್ಜೆ ಗುಮಾಸ್ತನನ್ನು ಅಮಾನತು ಮಾಡ ಬೇಕು. ಹಾಗೂ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಮತ್ತು ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ದೂರು ನೀಡಿದ್ದಾರೆ.

ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಚಿಕ್ಕಹೊನ್ನಯ್ಯ ನಕಲಿ ಬಿಲ್ ಸೃಷ್ಟಿಸಿ ಈ ಗೋಲ್ ಮಾಲ್ ನಡೆಸಿರುವ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ರಮೇಶ್ ದೂರು ನೀಡಿದ್ದಾರೆ. ಗಾಂಧಿನಗರದ ವಾರ್ಡ್ ನಂಬರ್ 121ರ ಗೋಪಾಲಪುರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಕೆಆರ್‍ಐಡಿಎಲ್‍ಗೆ ಕಾರ್ಯಾದೇಶ ಪತ್ರ ನೀಡಲಾಗಿತ್ತು. ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ನಮೂದಿಸಿ ಮಾಡದ ಕೆಲಸಕ್ಕಾಗಿ ಸುಮಾರು 97 ಲಕ್ಷ ರೂ.ಗಳನ್ನು ಚೆಕ್ ಮೂಲಕ ಬಿಡುಗಡೆ ಮಾಡಲಾಗಿತ್ತು.

ಆದರೆ, ಕಾಮಗಾರಿ ಪೂರ್ಣಗೊಳಿಸದೆ ಚಿಕ್ಕ ಹೊನ್ನಯ್ಯ ಲೆಕ್ಕ ಅಧಿಕ್ಷಕ ಉಮೇಶ್ ಎಂಬುವರ ಸಹಿಯನ್ನು ತಾವೇ ಮಾಡಿ, ಬೇರೆ ಕಡೆ ಮಾಡಿರುವ ಕಾಮಗಾರಿಯ ಛಾಯಚಿತ್ರಗಳನ್ನು ಲಗತ್ತಿಸಿ ಒಂದು ಕೋಟಿ ಹಣ ಬಿಡುಗಡೆ ಮಾಡಿಸಿ ಬಿಬಿಎಂಪಿಗೆ ವಂಚಿಸಿದ್ದಾರೆ ಎಂದು ರಮೇಶ್ ದೂರಿನಲ್ಲಿತಿಳಿಸಿದ್ದಾರೆ. ಕಾಮಗಾರಿ ಪಡೆದಿದ್ದ ಗುತ್ತಿಗೆದಾರ ಚಂದ್ರಪ್ಪ ಎಂಬುವರೊಂದಿಗೆ ಶಾಮೀಲಾಗಿ ಚಿಕ್ಕಹೊನ್ನಯ್ಯ ಈ ಗೋಲ್‍ಮಾಲ್ ನಡೆಸಿದ್ದಾರೆ. ಸ್ವತಃ ಉಮೇಶ್ ಅವರೆ ನನ್ನ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ಹೀಗಾಗಿ ಗುತ್ತಿಗೆದಾರನ ಆಮಿಷಕ್ಕೆ ಬಲಿಯಾಗಿ ಒಂದು ಕೋಟಿ ಹಣ ಬಿಡುಗಡೆ ಮಾಡಿಸಿದ ಆರೋಪಕ್ಕೆ ಗುರಿಯಾಗಿರುವ ಚಿಕ್ಕಹೊನ್ನಯ್ಯ ಅವರನ್ನು ಈ ಕೂಡಲೆ ಅಮಾನತುಗೊಳಿಸಬೇಕು. ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ ಗಳು ಹಾಗೂ ಗುತ್ತಿಗೆದಾರ ಚಂದ್ರಪ್ಪನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದರ ಜತೆಗೆ ಕೆಆರ್‍ಐಡಿಎಲ್‍ಗೆ ಬಿಡುಗಡೆ ಯಾಗಿರುವ 97 ಲಕ್ಷ ರೂ.ಗಳನ್ನು ವಾಪಸ್ ಪಡೆಯಬೇಕು ಎಂದು ವಿನಂತಿಸಿಕೊಂಡಿದ್ದಾರೆ.

Facebook Comments