“ಒಂದೇ ದಿನ ವೈಸರಾಯ್ ಆದರೆ ಹರಿಜನ ಪತ್ರಿಕೆ ಬಿಟ್ಟು ಎಲ್ಲ ಪತ್ರಿಕೆಗಳನ್ನು ನಿಷೇಧಿಸುತ್ತಿದ್ದೆ”

ಈ ಸುದ್ದಿಯನ್ನು ಶೇರ್ ಮಾಡಿ

ಬಹಳ ಪ್ರಸಾರ ಸಂಖ್ಯೆಯೂ ಇರಲಿಲ್ಲ. ಪ್ರಸಾರದ ಅಗ್ಗದ ತಂತ್ರಗಳ ಮೇಲೆ ಅವಲಂಭಿತರಾಗಿರಲಿಲ್ಲ. ಆದರೆ ಈ ಪತ್ರಿಕೆ ಓದುಗರ ಮೇಲೆ ಬೀರುತ್ತಿದ್ದ ಪ್ರಭಾವ ಹೇಳಲಸದಳವಾಗಿತ್ತು. ಬ್ರಿಟೀಷರು ಭಾರತ ವಿರೋಧಿ ನಿಲುವು ತೆಗೆದು ಕೊಂಡಾಗ ಈ ಪತ್ರಿಕೆ ನೀಡುತ್ತಿದ್ದ ವರದಿಗಳಿಂದ ಇಡೀ ಜನ ಸಮುದಾಯವೇ ಸಿಡಿದೇಳುವಂತೆ ಮಾಡುತ್ತಿತ್ತು.

ಅಸ್ಪೃಷ್ಯತೆ, ಮಹಿಳಾ ಸಮಾನತೆ, ಅಂಧಶ್ರದ್ಧೆಗಳ ವಿಷಯದಲ್ಲಿ ಇದು ತೆಗೆದುಕೊಳ್ಳುತ್ತಿದ್ದ ನಿಲುವು ಪಾರದರ್ಶಕವಾಗಿತ್ತು. ತಾನು ಕೊಟ್ಟ ಅಭಿಪ್ರಾಯದಿಂದ ಹಿಂದೆ ಸರಿಯುವ ಪ್ರಶ್ನೆಯಂತೂ ಇರಲೇ ಇಲ್ಲ. ತಮ್ಮ ಪತ್ರಿಕೆಯಲ್ಲಿ ತಾವೇ ಕೊಟ್ಟ ಅಭಿಪ್ರಾಯಕ್ಕೆ ಬೇರೆಯವರು ವಿರುದ್ದ ನಿಲುವುಗಳನ್ನು ಹೊಂದಿದ್ದರೆ ಅಂತವರ ಅಭಿಪ್ರಾಯಗಳನ್ನು ಹಾಕುತ್ತಿದ್ದರಿಂದ ಮಹತ್ವಪೂರ್ಣ ಚರ್ಚೆಗಳು ನಡೆಯುತ್ತಿದ್ದವು.

ಈ ಪತ್ರಿಕೆಯೂ ಆರ್ಥಿಕ ಸಂಕಷ್ಟದಿಂದ ನಲುಗತೊಡಗಿತು. ಇನ್ನೇನು ಪತ್ರಿಕೆ ನಿಲುಗಡೆಯಾಗುತ್ತಿದೆ ಎಂಬ ಹಂತಕ್ಕೆ ಬಂದು ನಿಂತಿತು.ಅನೇಕರ ಸಹಾಯ ಮತ್ತು ಸಹಕಾರಗಳು ಬಂದವಾದರೂ ಅದು ಸಾಕಾಗಲಿಲ್ಲ. ಬರ್ಮಾದ ಕಾಗದ ಕಾರ್ಖಾನೆಯ ಮಾಲೀಕರೊಬ್ಬರು ಪತ್ರಿಕೆಗೆ ಉಚಿತವಾಗಿ ನ್ಯೂಸ್ ಪ್ರಿಂಟ್ ಕೊಡುತ್ತೇನೆಂದು ಬಂದರು. ಎಷ್ಟಾದರೂ ನ್ಯೂಸ್ ಪ್ರಿಂಟ್ ತೆಗೆದುಕೊಳ್ಳಿ .ಪುಕ್ಕಟೆಯಾಗಿ ಬಳಸಿಕೊಳ್ಳಿ ಎಂದರು. ಸಂಪಾದಕರಿಗೂ ಇದು ಒಪ್ಪಿಗೆಯಾಯಿತು. ಆದರೊಂದು ಷರತ್ತೆಂದರು.

ನಿಮ್ಮ ಪತ್ರಿಕೆಯಲ್ಲಿ ನಮ್ಮ ಉದ್ಯಮದ ಜಾಹಿರಾತು ಹಾಕಬೇಕು ಎಂದರು. ಜಾಹಿರಾತಿಲ್ಲದೆ ಪತ್ರಿಕೆ ನಡೆಸುವುದು ಪತ್ರಿಕೆಯ ನೀತಿಯಾಗಿದ್ದರಿಂದ ಬರ್ಮಾ ದೇಶದ ಟಿಟಿರ್ಗ ಎಂಬ ಈ ಕಾರ್ಖಾನೆಯ ಮಾಲೀಕರ ಈ ಷರತ್ತಿಗೆ ಒಪ್ಪಿಗೆ ನೀಡಲಿಲ್ಲ. ಅವರ ಕೊಡುಗೆಯನ್ನು ಸಂಪೂರ್ಣ ತಿರಸ್ಕರಿಸಿದರು.ಬೇಕಾದರೆ ಸಂಪಾದಕೀಯ ಬರಹದಲ್ಲಿ ಪತ್ರಿಕೆಗೆ ಸದರಿ ವ್ಯಕ್ತಿ ಉಚಿತವಾಗಿ ನ್ಯೂಸ್ ಪ್ರಿಂಟ್ ನೀಡುತ್ತಿದ್ದಾರೆ ಎಂದು ಬರೆಯುತ್ತೇನೆಯೇ ಹೊರತು ನಿಮ್ಮ ಉತ್ಪನ್ನಗಳಿಗೆ ಜಾಹೀರಾತಾಗಿ ಪತ್ರಿಕೆ ಮಾರ್ಪಡುವುದಿಲ್ಲ ಗಾಂಧೀಜಿ ಹೇಳಿದ್ದರು.

ಇದು ಹರಿಜನ ಪತ್ರಿಕೆಯ ನಿಲುವು ಮಾತ್ರವಲ್ಲ ಅವರು ಆರಂಭಿಸಿದ್ದ ಗುಜರಾತಿ ಭಾಷೆಯ ನವಜೀವನ,ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದ ಇಂಡಿಯನ್ ಒಪೀನಿಯನ್, ಯಂಗ್ ಇಂಡಿಯಾ ಈ ಎಲ್ಲವುಗಳ ನಿಲುವೂ ಇದೇ ಆಗಿತ್ತು.

ಓದುಗರ ಸ್ವತಂತ್ರ ಅಲೋಚನೆಗಳನ್ನು ಕೊಲ್ಲುವ ಕೆಲಸದಲ್ಲಿ ಮಾಧ್ಯಮಗಳು ಮೆರೆಯಬಾರದೆಂಬ ಕಿವಿ ಮಾತು ಹೇಳುತ್ತಿದ್ದ ಗಾಂಧಿಯವರು ಪತ್ರಿಕಾ ಸ್ವಾತಂತ್ರ್ಯವೆಂಬುದು ಒಂದು ದೇಶದ ಅಮೂಲ್ಯ ಸಂಪತ್ತು ಎಂದೂ ಹೇಳುತ್ತಿದ್ದರು. ಸ್ವತಂತ್ರ ಪತ್ರಿಕೋದ್ಯಮದ ಮೇಲೆ ಇಷ್ಟೊಂದು ಗೌರವ ಇಟ್ಟುಕೊಂಡಿದ್ದ ಗಾಂಧಿಯವರು ಕೆಲವು ಪತ್ರಿಕೆಗಳ ಸ್ವೇಚ್ಚಾಚಾರದ ವರ್ತನೆಗಳಿಂದ ರೋಸಿ ಹೋಗಿದ್ದರು. ಅಂದು ಇದ್ದ ಕೆಲವು ಪತ್ರಿಕೆಗಳು ಮತೀಯ ಗಲಭೆಗಳಿಗೆ ಪೆಟ್ರೋಲ್ ಸುರಿವ ಕೆಲಸದಲ್ಲಿ ತೊಡಗಿದ್ದವು. ಇನ್ನೊಂದಷ್ಟು ಪತ್ರಿಕೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಪತ್ರಿಕೆಗಳನ್ನು ಸ್ಥಾಪಿಸಿದ್ದವು.ಈ ಕಾರಣಕ್ಕಾಗಿ ಅತಿ ರಂಜಿತ ವರದಿಗಳ ಮೊರೆ ಹೋಗಿ ಪ್ರಸರಣವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದವು.

ಪತ್ರಿಕೆಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ಒಪ್ಪಿಕೊಂಡು ಪತ್ರಿಕೆಗಳನ್ನು ನಡೆಸುವುದರ ಬದಲು ಪತ್ರಿಕೆಗಳನ್ನು ನಿಲ್ಲಿಸುವುದೇ ಒಳಿತು ಎನ್ನುತ್ತಿದ್ದ ಇದೇ ಗಾಂಧಿ ಒಂದೇ ಒಂದು ದಿನ ನನ್ನನ್ನು ವೈಸರಾಯ್ ಸ್ಥಾನದಲ್ಲಿ ಕೂರಿಸಿ ಸರ್ವಾಧಿಕಾರಿಯಾದರೆ ತಮ್ಮ ಹರಿಜನ ಪತ್ರಿಕೆಯೊಂದನ್ನು ಬಿಟ್ಟು ಭಾರತದಲ್ಲಿರುವ ಎಲ್ಲ ಪತ್ರಿಕೆಗಳನ್ನೂ ನಿಷೇಧಿಸುತ್ತಿದ್ದಾ ಎಂಬ ಮಾತನ್ನೂ ಹೇಳುವುದರ ಮೂಲಕ ಮೂವತ್ತು ಮತ್ತು ನಲವತ್ತರ ದಶಕದಲ್ಲಿನ ಪತ್ರಿಕೆಗಳ ಅಸಹ್ಯಕರ ಬೇಜವಾಬ್ದಾರಿ ವರ್ತನೆಗಳಿಗೆ ತಿರುಗೇಟನ್ನು ಸಹಾ ಈ ಮಾತಿನ ಮೂಲಕ ನೀಡುತ್ತಾರೆ.ಓದುಗರ ಚಂದಾ ಹಣದ ಆಧಾರದ ಮೇಲೆಯೇ ಪತ್ರಿಕೆಗಳು ಬದುಕಿದರೆ,ಕ್ರಿಯೆಯಲ್ಲಿದ್ದರೆ, ಅಂತಹ ಪತ್ರಿಕೋದ್ಯಮವೇ ನಿಜವಾದ ಪತ್ರಿಕೋದ್ಯಮ ಎಂಬುದು ಗಾಂಧಿಯವರ ಖಚಿತ ಅಭಿಪ್ರಾಯವಾಗಿತ್ತು.

Facebook Comments