ಬೆಂಗಳೂರಲ್ಲಿ 500 ಕಡೆ ವಾಯು ಶುದ್ಧೀಕರಣ ಯಂತ್ರ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.23- ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಾಯುಮಾಲಿನ್ಯ ಕಾಪಾಡಲು ವಾಯುಶುದ್ಧೀಕರಣ ಘಟಕ ಅಳವಡಿಸುವ ಕುರಿತು ಎ ಟೆಕ್ ಟ್ರೋನ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ವಾಯುಮಾಲಿನ್ಯ ನಿಯಂತ್ರಣ ಮಾಡಲು ಕಾಪೆರ್ರೇಪೊಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಎ ಟೆಕ್ ಟ್ರೋನ್ ಸಂಸ್ಥೆ ನಗರದ ಪ್ರಮುಖ ಸ್ಥಳಗಳಲ್ಲಿ ವಾಯುಮಾಲಿನ್ಯ ಶುದ್ಧೀಕರಣ ಘಟಕ ಅಳವಡಿಸಲಾಗುತ್ತಿದೆ ಎಂದು ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮೇಯರ್ ಗಂಗಾಂಬಿಕೆ ತಿಳಿಸಿದರು.

ಎ ಟೆಕ್ ಟ್ರೋನ್ ಸಂಸ್ಥೆ ಯ ಸಂಸ್ಪಾಪಕರಾದ ರಾಜೀವ್‍ಕೃಷ್ಣನ್ ಅವರ ಮೂಲಕ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಪಾಲಿಕೆಯ 500 ಜಂಕ್ಷನ್‍ಗಳಲ್ಲಿ ವಾಯುಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗುತ್ತದೆ ಎಂದು ಮೇಯರ್ ಹೇಳಿದರು.

ನಗರದಲ್ಲಿ 80 ಲಕ್ಷಕ್ಕೂ ಅಧಿಕ ವಾಹನಗಳಿವೆ. ಪ್ರತಿ ವರ್ಷ ಶೇ. 10ರಷ್ಟು ವಾಹನಗಳು ಹೆಚ್ಚಾಗುತ್ತಿವೆ. ಇದರಿಂದ ವಾಯುಮಾಲಿನ ದಿನೇ ದಿನೇ ಹೆಚ್ಚಾಗುತ್ತಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ವಾಯುಮಾಲಿನ್ಯ ಶುದ್ಧೀಕರಣ ಯಂತ್ರಗಳನ್ನು ಅಳವಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎ ಟೆಕ್ ಟ್ರೋನ್ ಸಂಸ್ಥೆ ಈಗಾಗಲೇ ಪ್ರಾಯೋಗಿಕವಾಗಿ ಹಡ್ಸನ್ ವೃತ್ತದ ಬಳಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಿದೆ. ಇದೀಗ ಎ ಟೆಕ್ ಟ್ರೋನ್ ಕಂಪೆನಿಯು ಸಿಎಸ್‍ಆರ್ ಅನುದಾನದಡಿ ನಗರದ 500 ಜಂಕ್ಷನ್‍ಗಳಲ್ಲಿ ಯಂತ್ರಗಳನ್ನು ಅಳವಡಿಸುತ್ತಿದೆ. ಅದಕ್ಕೆ ಕೌನ್ಸಿಲ್‍ನಲ್ಲೂ ನಿರ್ಣಯ ಕೈಗೊಳ್ಳಲಾಗಿದೆ.

ಅಲ್ಲದೆ ಈ ಸಾಲಿನ ಬಜೆಟ್‍ನಲ್ಲಿ ವಾಯು ಶುದ್ಧೀಕರಣ ಯಂತ್ರಗಳ ಅಳವಡಿಕೆಗೆ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಯಂತ್ರ ಅಳವಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವಾಯು ಶುದ್ಧೀಕರಣ ಯಂತ್ರ ಅಳವಡಿಕೆಗೆ ಪಾಲಿಕೆಯಿಂದ ಯಾವುದೇ ವೆಚ್ಚ ಭರಿಸುತ್ತಿಲ್ಲ. ಬದಲಿಗೆ ಎ ಟೆಕ್ ಟ್ರೋನ್ ಕಂಪೆನಿಯು ಕಾಪೆರ್ರೇಪೊಟ್ ಸಂಸ್ಥೆಗಳ ಮೂಲಕ ಯಂತ್ರಗಳನ್ನು ಅಳವಡಿಕೆ ಮಾಡಲಿದೆ.

ಸಂಚಾರಿ ಪೊಲೀಸರ ಜೊತೆ ಚರ್ಚಿಸಿ ಎಲ್ಲೆಲ್ಲೆ ಅವಶ್ಯಕತೆಯಿದೆ ಅಲ್ಲಿ ಮೊದಲು ಯಂತ್ರಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಹೇಳಿದ ಮೇಯರ್ ವಾಯುಮಾಲಿನ್ಯ ಹೆಚ್ಚಿಸುವ ವಾಹನಗಳಿಗೆ ಕಡಿವಾಣ ಹಾಕುವಂತೆ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

Facebook Comments