ಸೇಡು ತೀರಿಸಿಕೊಂಡರೆ ಪೊಲೀಸ್..? ಎನ್‌ಕೌಂಟರ್‌ನಲ್ಲಿ ಪಾತಕಿ ವಿಕಾಸ್ ದುಬೆ ಫಿನಿಶ್..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ,ಜು.10- ನಿನ್ನೆಯಷ್ಟೇ ಪೊಲೀಸರ ಕೈಗೆ ಸೆರೆಸಿಕ್ಕಿದ್ದ ಉತ್ತರ ಪ್ರದೇಶದ ಮೋಸ್ಟ್ ವಾಂಟೆಂಡ್ ಪಾತಕಿ ವಿಕಾಸ್ ದುಬೆ ಪರಾರಿಯಾಗುವ ಯತ್ನದಲ್ಲಿ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಸುಮಾರು ಎರಡು ದಶಕಗಳ ಕರಾಳ ಚರಿತ್ರೆಯೊಂದು ಶಾಶ್ವತವಾಗಿ ಇತಿಹಾಸದ ಪುಟ ಸೇರಿದೆ.

ಕಾನ್ಪುರದ ಸಚೇಂದಿ ಗಡಿಯಲ್ಲಿ ಈ ಎನ್‍ಕೌಂಟರ್ ನಡೆದಿದೆ. ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ. ಕುಖ್ಯಾತ ರೌಡಿಯನ್ನು ಕಾನ್ಪುರಕ್ಕೆ ತರೆತರುತ್ತಿದ್ದಾಗ ಬರ್ರಾ ಎಂಬಲ್ಲಿ ಪೊಲೀಸ್ ವಾಹನ ಅಪಘಾತಕ್ಕೀಡಾಗಿದೆ. ಈ ಸಂದರ್ಭ ಆತ ತಪ್ಪಿಸಿಕೊಳ್ಳಲು ಮುಂದಾದ ಎಂದು ಪೊಲೀಸರು ತಿಳಿಸಿದ್ದಾರೆ.

ದುಬೆ ಹಾಗೂ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್ಟಿಎಫ್) ನಡುವೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಪೊಲೀಸರು ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನೂ ಸಹ ಲಾಲಾ ಲಜಪತ್ ರಾಯ್ ಅಥವಾ ಹಲ್ಲೆಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಕಾನ್ಪುರದ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ವಾಹನ ಉರುಳಿಬಿದ್ದ ಬೆನ್ನಲ್ಲೇ ಸಿಬ್ಬಂದಿಯೊಬ್ಬರ ಗನ್ ಕಸಿದುಕೊಂಡು ಗ್ಯಾಂಗ್ಸ್ಟರ್ ವಿಕಾಸ್ ದುಬೆ, ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಶರಣಾಗತಿ ಆಗುವಂತೆ ಕೇಳಲಾಯಿತು. ಆದರೆ, ಪೊಲೀಸರ ಮೇಲೆಯೇ ದುಬೆ ಗುಂಡಿನ ದಾಳಿ ನಡೆಸಿದ.

ಆತ್ಮರಕ್ಷಣೆಗಾಗಿ ನಮ್ಮ ಪೊಲೀಸರು ಸಹ ದುಬೆ ವಿರುದ್ಧ ಗುಂಡಿನ ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆ ಅಥವಾ ಹ್ಯಾಲೆಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಒಂದು ವಾರದ ಹಿಂದಷ್ಟೇ ರೌಡಿ ವಿಕಾಸ್ ದುಬೆ ಇರುವ ಪ್ರದೇಶದ ಬಗ್ಗೆ ಪಕ್ಕಾ ಮಾಹಿತಿ ಪಡೆದು 50 ಪೊಲೀಸರ ತಂಡ ಆತನನ್ನು ಬಂಧಿಸಲು ತೆರಳಿತ್ತು. ಆಗ ವಿಕಾಸ್ ದುಬೆ ಮತ್ತು ಆತನ ಸಹಚರರು ಪೊಲೀಸರ ಆಯುಧಗಳನ್ನೇ ವಶಪಡಿಸಿಕೊಂಡು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 8 ಮಂದಿ ಪೊಲೀಸರು ಮೃತಪಟ್ಟಿದ್ದರು.

2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು. 2000ದಲ್ಲಿ ನಡೆದ ರಾಮ್ ಬಾಬು ಯಾದವ್ ಹತ್ಯೆ ಪ್ರಕರಣ, 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲಿಯೂ ವಿಕಾಸ್ ದುಬೆ ಹೆಸರು ಕೇಳಿ ಬಂದಿದೆ.

ಈ ಹತ್ಯೆಗಳು ನಡೆಯವಾಗ ಜೈಲಿನಲ್ಲಿದ್ದ ವಿಕಾಸ್ ದುಬೆ ಅಲ್ಲಿಂದಲೇ ಸಹಚರರ ಮೂಲಕ ಸಂಚು ರೂಪಿಸಿದ್ದ. ಆತನನನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದರು. ಆತನ ಆಪ್ತ ಅಮರ್ ದುಬೆಯನ್ನು ಪೊಲೀಸರು ಬುಧವಾರ ಹತ್ಯೆ ಮಾಡಿದ್ದರು. ಗುರುವಾರ ಮತ್ತೊಬ್ಬ ಅತ್ಯಾಪ್ತ ಪ್ರಭಾತ್ ಮಿಶ್ರಾನನ್ನುಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಿದ್ದರು.

ಇದಕ್ಕೂ ಮುನ್ನ ಆತನ ತಾಯಿ ತನ್ನ ಮಗನನ್ನು ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಿ, ಅಂತಹ ಮಗ ನನಗೆ ಬೇಡ ಎಂದಿದ್ದರು. ಬಳಿಕ ಆತನ ಮನೆಯನ್ನು ಕೂಡ ಜಿಲ್ಲಾಡಳಿತ ನೆಲಸಮ ಮಾಡಿತ್ತು.

ಇಂದು ಪೊಲೀಸ್ ಕಾರಿನಲ್ಲಿ ತೆರಳುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ವಿಕಾಸ್‍ನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ವಿಕಾಸ್ ದುಬೈ ಕಳೆದ ಶುಕ್ರವಾರ ಕಾನ್ಪುರದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ನಿನ್ನೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳ ದೇವಾಲಯದ ಬಳಿ ಬಂಧಿಸಲಾಗಿತ್ತು. ಸತತ 6 ದಿನಗಳ ಹುಡುಕಾಟಕ್ಕೆ ನಿನ್ನೆ ಪೂರ್ಣವಿರಾಮ ಬಿದ್ದಿತ್ತು.

ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ನಿನ್ನೆ ಬೆಳಗ್ಗೆ ವಿಕಾಸ್ ದುಬೆಯನ್ನು ಅರೆಸ್ಟ್ ಮಾಡಲಾಗಿತ್ತು. ಎಂಟು ಪೊಲೀಸರನ್ನ ಕೊಂದು ಏಳು ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ನಿನ್ನೆ ಬಂಧಿಸಲಾಗಿತ್ತು. ಈತ ಮಹಾಕಾಲ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಸಿಕ್ಕಿಬಿದ್ದಿದ್ದ. ಜುಲೈ 3 ರಂದು ಉತ್ತರ ಪ್ರದೇಶದ ಕಾನ್ಪುರದ ಬಿಕ್ರು ಗ್ರಾಮದಲ್ಲಿ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ, ಆತ ಹಾಗೂ ಆತನ ಸಹಚರರು ಪೊಲೀಸರ ಮೇಲೆ ದಾಳಿ ನಡೆಸಿ 8 ಸಿಬ್ಬಂದಿಯನ್ನ ಹತ್ಯೆ ಮಾಡಿದ್ದರು. ಘಟನೆ ನಡೆದ 7 ದಿನಗಳ ಬಳಿಕ ದುಬೆ ಸೆರೆ ಸಿಕ್ಕಿದ್ದಾನೆ.

ಬಿಕ್ರು ಗ್ರಾಮದ ನಿವಾಸಿಯಾಗಿರುವ ವಿಕಾಸ್ ದುಬೆ ವಿರುದ್ಧ ಕೊಲೆ, ದರೋಡೆ ಮತ್ತು ಅಪಹರಣ ಸೇರಿ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ಗಳು ದಾಖಲಾಗಿವೆ. 2001 ರಲ್ಲಿ ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಅವರನ್ನು ಹತ್ಯೆ ಮಾಡಿದ ಆರೋಪ ಕೂಡ ದುಬೆ ಮೇಲಿದೆ.

# ಘಟನೆ ಹಿನ್ನೆಲೆ ಏನು?
ಕಾನ್ಪುರ ಸಮೀಪದ ಡಿಕ್ರು ಗ್ರಾಮದಲ್ಲಿ ವಿಕಾಸ್ ದುಬೆ ಎಂಬ ಕ್ರಿಮಿನಲ್ ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಆತನ ಬಂಧನಕ್ಕೆ ಬಲೆ ಬೀಸಿತ್ತು. ವಿಕಾಸ್ ದುಬೆ 60 ಅಪರಾಧ ಪ್ರಕರಣಗಳಲ್ಲಿ ಬೇಕಾದವನಾಗಿದ್ದ. ಜುಲೈ 3ರ ತಡ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು. ಅಂದು ನಸುಕಿನ ವೇಳೆ ವಿಕಾಸ್ ದುಬೆಯ ಅಡಗುದಾಣದ ರೂಫ್ ಟಾಪ್‍ನಿಂದ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಡಿಎಸ್ಪಿ ಸೇರಿದಂತೆ 8 ಪೊಲೀಸರ ಹತ್ಯೆ ನಡೆದಿತ್ತು.

Facebook Comments