ಗ್ಯಾಂಗ್‌ಸ್ಟರ್ ವಿಕಾಸ್ ದುಬೆನ ಬಲಗೈ ಬಂಟ ಅಮರ್ ದುಬೆ ಫಿನಿಷ್..!

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಜು.8-ಉತ್ತರ ಪ್ರದೇಶವನ್ನೇ ತಲ್ಲಣಗೊಳಿಸಿದ್ದ ಎಂಟು ಮಂದಿ ಪೊಲೀಸರ ಹತ್ಯೆಗೈದ ಗ್ಯಾಂಗಸ್ಟರ್ ವಿಕಾಸ್ ದುಬೆನ ಬಲಗೈ ಬಂಟನನ್ನು ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಎನ್‍ಕೌಂಟರ್ ಮಾಡಿದೆ.

ಮೋಸ್ಟ್ ವಾಂಟೆಡ್ ಲಿಸ್ಟ್‍ನಲ್ಲಿರುವ ವಿಕಾಸ್ ದುಬೆ ಆಪ್ತ ಅಮರ್ ದುಬೆ ಎಂಬಾತನೇ ಎನ್‍ಕೌಂಟರ್‍ನಲ್ಲಿ ಹತನಾಗಿದ್ದಾನೆ. ಕಳೆದ ತಡರಾತ್ರಿ ಉತ್ತರಪ್ರದೇಶದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ ವೇಳೆ ಅಮರ್ ದುಬೆ ಪರಾರಿಯಾಗುವ ಯತ್ನದಲ್ಲಿ ವಿಶೇಷ ಕಾರ್ಯಾಚರಣೆ ಪಡೆ ಮೇಲೆ ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದ.

ಇದಕ್ಕೆ ಪ್ರತಿಯಾಗಿ ಎಸ್‍ಟಿಎಫ್ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ ವೇಳೆ ಎನ್‍ಕೌಂಟರ್‍ನಲ್ಲಿ ಅಮರ್ ದುಬೆ ಸಾವನ್ನಪ್ಪಿದ್ದಾನೆ ಎಂದು ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ತಿಳಿಸಿದ್ದಾರೆ.

ಇತ್ತೀಚೆಗೆ ವಿಕಾಸ್ ದುಬೈ ಮತ್ತು ಆತನ ಸಹಚರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಎಂಟು ಮಂದಿಯನ್ನು ಕೊಲೆಗೈದಿದ್ದರು. ಈ ಪ್ರಕರಣದಲ್ಲಿ ಅಮರ್ ದುಬೆ ಪ್ರಮುಖ ಆರೋಪಿಯಾಗಿದ್ದ. ಈತನ ಸುಳಿವು ನೀಡಿದವರಿಗೆ 25 ಸಾವಿರ ಬಹುಮಾನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು.

ಅಮೀರ್‍ಪುರ್ ಜಿಲ್ಲೆಯ ಮೌದಾಹ ಗ್ರಾಮದಲ್ಲಿ ವಿಕಾಸ್ ದುಬೆ ಅಡಗಿಕುಳಿತಿದ್ದ. ಈ ಸುಳಿವು ಅರಿತ ಎಸ್‍ಟಿಎಫ್ ತಂಡ ಬಂಧಿಸಲು ಹೋದಾಗ ಎನ್‍ಕೌಂಟರ್ ನಡೆದಿದೆ. ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವಿಕಾಸ್ ದುಬೈ ಕೊಲೆ, ಸುಲಿಗೆ, ಹಫ್ತಾ ವಸೂಲಿ, ದೊಂಬಿ ನಡೆಸುವುದು ಸೇರಿದಂತೆ ನೂರಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಹಲವಾರು ಬಾರಿ ಪೊಲೀಸರು ಈತನನ್ನು ಬಂಧಿಸಲು ಯತ್ನಿಸಿದ ವೇಳೆ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ. ವಿಕಾಸ್ ದುಬೆಯ ಆಪ್ತನಾಗಿದ್ದ ಅಮರ್ ದುಬೆ ಹತನಾಗಿರುವುದು ಪೊಲೀಸರ ಬಹುದೊಡ್ಡ ಯಶಸ್ಸು ಎನ್ನಲಾಗುತ್ತಿದೆ.

ಇದೀಗ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಆರೋಪಕ್ಕೆ ಸಿಲುಕಿರುವ ವಿಕಾಸ್ ದುಬೆ ಸುಳಿವು ನೀಡಿದವರಿಗೆ ಎರಡೂವರೆ ಲಕ್ಷ ಬಹುಮಾನ ನೀಡುವುದಾಗಿ ಉತ್ತರಪ್ರದೇಶ ಪೊಲೀಸರು ಘೋಷಣೆ ಮಾಡಿದ್ದಾರೆ.

Facebook Comments