ಎಲ್‍ಇಡಿ ಬಲ್ಪ್ ಬಳಸಿ ಮನೆಯಲ್ಲೇ ಗಾಂಜಾ ಬೆಳೆಯುತ್ತಿದ್ದ ಖತರ್ನಾಕ್ ತಂಡ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.13- ನೆದರ್‍ಲ್ಯಾಂಡ್‍ನಿಂದ ಡಾರ್ಕ್ ವೆಬ್‍ಸೈಟ್ ಮೂಲಕ ಮಾದಕವಸ್ತುಗಳನ್ನು ತರಿಸುತ್ತಿದ್ದ ಬಿಹಾರ ಮೂಲದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 20 ಲಕ್ಷ ಮೌಲ್ಯದ 225 ಎಲ್‍ಎಸ್‍ಡಿ ಸ್ಲಿಪ್ಸ್ ಹಾಗೂ 2 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿ ಅಮಾತ್ಯ ರಿಶಿ (23) ಮತ್ತು ಸಹಚರರಾದ ಆದಿತ್ಯಕುಮಾರ್ (21) ಮತ್ತು ಮಂಗಲ್ ಮುಕ್ಯ (30) ಬಂಧಿತರು.

ಆರೋಪಿ ಅಮಾತ್ಯ ರಿಶಿ ಜೈನ್ ಯುನಿವರ್ಸಿಟಿಯಲ್ಲಿ ಬ್ಯಾಚಲರ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ವಿದ್ಯಾಭ್ಯಾಸಕ್ಕಾಗಿ ಬಿಹಾರದಿಂದ ಬೆಂಗಳೂರಿಗೆ ಬಂದು ಮೈಸೂರು ರಸ್ತೆಯ ಕೆಂಗೇರಿಯಲ್ಲಿ ಎಂಬಿಆರ್ ಶಾಂಘಿಲಾ ಅಪಾರ್ಟ್‍ಮೆಂಟ್‍ನ ಫ್ಲ್ಯಾಟ್‍ವೊಂದರಲ್ಲಿ ವಾಸವಿದ್ದನು.

ಟಾರ್ ಎಂಬ ಬ್ರೌಸರ್ ಸರ್ಚ್ ಎಂಜಿನ್ ಮುಖಾಂತರ ಎಂಪೈರ್ ಮಾರ್ಕೆಟ್ ಎಂಬ ಡಾರ್ಕ್ ವೆಬ್‍ಸೈಟ್ ಮೂಲಕ ಈತ ಮಾದಕ ವಸ್ತುಗಳನ್ನು ನೆದರ್‍ಲ್ಯಾಂಡ್‍ನಿಂದ ತರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನ ಮನೆ ಮೇಲೆ ದಾಳಿ ನಡೆಸಿದ್ದರು.

ದಾಳಿ ಸಂದರ್ಭದಲ್ಲಿ ಅಮಾತ್ಯ ರಿಶಿ ಹಾಗೂ ಆತನ ಸಹಚರರು ತರಿಸಿದ್ದ 225 ಎಲ್‍ಎಸ್‍ಡಿ ಸ್ಲಿಪ್ಸ್ ಹಾಗೂ 2 ಕೆಜಿ ಗಾಂಜಾ ಮತ್ತು 10,200 ರೂ. ನಗದು, ಗಾಂಜಾ ಗಿಡಗಳಿದ್ದ ಪಾಟ್, ಕಂಪ್ಯೂಟರ್, 3 ಮೊಬೈಲ್,ಎಲ್‍ಇಡಿ ಲೈಟ್ ಹಾಗೂ ಸ್ಟ್ಯಾಂಡ್ ಗಳನ್ನು ವಶಪಡಿಸಿಕೊಂಡಿದ್ದಾರೆ.ತಪಾಸಣೆ ಸಂದರ್ಭದಲ್ಲಿ ವಿದೇಶದಿಂದ ಗಾಂಜಾ ಗಿಡಗಳ ಬೀಜಗಳನ್ನು ತರಿಸಿಕೊಂಡು ತನ್ನ ಮನೆಯಲ್ಲಿಯೇ ಪಾಟ್‍ಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದುದು ಕಂಡುಬಂದಿದೆ.

ಸೂರ್ಯನ ಬೆಳಕಿಲ್ಲದೆ ಮನೆಯೊಳಗೆ ಗಾಂಜಾ ಗಿಡಗಳನ್ನು ಬೆಳೆಸಲು ವಿಶೇಷ ರೀತಿಯಾದ ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಿದ್ದು, ಅದನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ಸಹಾಯದಿಂದ ವಿದೇಶದಿಂದ ಮಾದಕ ವಸ್ತುಗಳನ್ನು ತರಿಸುತ್ತಿದ್ದು, ಅದಕ್ಕಾಗಿ ಬಳಸಿಕೊಂಡಿದ್ದ ಕಂಪ್ಯೂಟರ್ ಹಾಗೂ ಹಾರ್ಡ್‍ಡಿಸ್ಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಕೆನಡಾ ದೇಶದಿಂದ ಹೈಡ್ರೋ ಗಾಂಜಾವನ್ನು ತರಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿದೇಶದಿಂದ ಕೊರಿಯರ್ ಮೂಲಕ ಮಾದಕ ವಸ್ತುಗಳನ್ನು ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ 2ನೇ ಪ್ರಕರಣವನ್ನು 15 ದಿನಗಳ ಅಂತರದಲ್ಲಿ ಸಿಸಿಬಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

 

Facebook Comments