ಕಸ ತುಂಬಕೊಂಡು ನಿಂತಲ್ಲೇ ನಿಂತ 300 ಲಾರಿಗಳು, ಗಬ್ಬೆದ್ದು ನಾರಲಿದೆ ಸಿಲಿಕಾನ್ ಸಿಟಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.9- ನಾಳೆಯಿಂದ ಬೆಂಗಳೂರು ಮಹಾನಗರದಲ್ಲಿ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಮೇಯರ್ ಹಾಗೂ ಆಯುಕ್ತರ ಬೇಜವಾ ಬ್ದಾರಿತನದಿಂದ ನಗರದ ಜನತೆ ಕಸದ ಸಮಸ್ಯೆಯಿಂದ ನರಳಬೇಕಾಗಿದೆ. ಅದೇನೋ ಗೊತ್ತಿಲ್ಲ. ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಕಸದ ಸಮಸ್ಯೆ ತೀವ್ರಗೊಳ್ಳುತ್ತದೆ. ಈ ಹಿಂದೆ ವೆಂಕಟೇಶ್‍ಮೂರ್ತಿ ಮೇಯರ್ ಆಗಿದ್ದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಸದ ಸಮಸ್ಯೆಯಿಂದ ಬೆಂಗಳೂರು ನಗರ ಅಪಕೀರ್ತಿಗೆ ಕಾರಣವಾಗಿತ್ತು.

ಈಗ ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಕಸದ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ. ಮಿಟಗಾನಹಳ್ಳಿ ಬೆಳ್ಳಳ್ಳಿ ಕ್ವಾರಿಗಳು ಈಗಾಗಲೇ ಭರ್ತಿಯಾಗಿದ್ದು, ಕಸ ತುಂಬಿರುವ 300 ಲಾರಿಗಳು ನಿಂತಿವೆ.  ನಾಳೆಯಿಂದ ಕಸ ಸಂಗ್ರಹಿಸಿ ಲಾರಿಗಳಿಗೆ ತುಂಬಲಾಗದೆ ಸಿಲಿಕಾನ್ ಸಿಟಿ ಗಬ್ಬೆದ್ದು ನಾರಲಿದೆ. ಇದನ್ನು ನಗರದ ಜನತೆ ಸಹಿಸಿಕೊಳ್ಳಲು ಸಿದ್ದವಾಗಬೇಕಿದೆ.

ಕಸ ಹಾಕಲೆಂದು ತಾತ್ಕಾಲಿಕವಾಗಿ ನಿರ್ಮಿಸಿದ್ದ ಮಿಟಗಾನಹಳ್ಳಿ ಕ್ವಾರಿ ಕೂಡ ಭರ್ತಿಯಾಗಿದ್ದು, ಕಸ ಹಾಕಲು ಈಗ ಜಾಗವಿಲ್ಲದಂತಾಗಿ ನೂರಾರು ಕ್ಯಾಂಟರ್‍ಗಳು ರಸ್ತೆಯಲ್ಲಿ ನಿಂತಿವೆ.  ಬಾಗಲೂರು ಕ್ವಾರಿ ಕೂಡ ಭರ್ತಿಯಾಗಿದೆ. ಎರಡು ತಿಂಗಳ ಅವಧಿ ನಂತರ ಭರ್ತಿಯಾಗಬೇಕಿದ್ದ ಮಿಟಗಾನಹಳ್ಳಿ ಕ್ವಾರಿ ಈಗಲೇ ಭರ್ತಿಯಾಗಿದೆ.

ಈ ಕುರಿತು ಮೇಯರ್ ಗೌತಮ್‍ಕುಮಾರ್ ಜೈನ್ ಸುದ್ದಿಗಾರರೊಂದಿಗೆ ಮಾತನಾಡಿ, ಪರ್ಯಾಯವಾಗಿ ಮಿಟಗಾನಹಳ್ಳಿ ಕ್ವಾರಿಯನ್ನು ಗುರುತಿಸಲಾಗಿತ್ತು. ಎರಡು ತಿಂಗಳು ಕಾಲಾವಕಾಶವಿತ್ತು. ಆದರೆ ಈಗಾಗಲೇ ಕ್ವಾರಿ ಭರ್ತಿಯಾಗಿದೆ. ಸಮಸ್ಯೆ ಅರಿತ ಕೂಡಲೇ ಜಂಟಿ ಆಯುಕ್ತರು ಹಾಗೂ ವಿಶೇಷ ಆಯುಕ್ತರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ನಿನ್ನೆ ರಾತ್ರಿಯೇ ಅವರೊಂದಿಗೆ ತರ್ತು ಸಭೆಯನ್ನು ನಡೆಸಲಾಗಿದೆ. ನಗರದ ಜನತೆಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಎರಡುಮೂರು ಕ್ವಾರಿಗಳನ್ನು ಈ ಹಿಂದೆ ಇದ್ದವರು ಗುರ್ತಿಸಬೇಕಿತ್ತು. ಯಾವ ಕಾರಣಕ್ಕಾಗಿ ಮಾಡಿಲ್ಲವೆಂಬುದು ಗೊತ್ತಾಗಿಲ್ಲ. ಅದನ್ನು ನಾನು ಹೇಳಲು ಬಯಸುವುದಿಲ್ಲ ಎಂದು ಹೇಳಿದರು.  ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತರಾದ ಡಾ.ರಂದೀಪ್, ಜಂಟಿ ಆಯುಕ್ತರಾದ ಸರ್ಫರಾಜ್‍ಖಾನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ರಂದೀಪ್ ಅವರು ಮಿಶ್ರಿತ ಕಸ ವಿಲೇವಾರಿಗೆ ಸ್ವಲ್ಪ ಸಮಸ್ಯೆಯಾಗಿದೆ. ಮಿಟಗಾನಹಳ್ಳಿ ಕ್ವಾರಿ 99% ತುಂಬಿದೆ ಇನ್ನು 1% ಅವಕಾಶವಿದೆ.
ಸರ್ಕಾರದಿಂದ ಬೇರೆ ಸ್ಥಳಗಳಲ್ಲಿ ಕಸ ಹಾಕಲು ಅನುಮತಿ ದೊರೆತಿಲ್ಲ. ಸದ್ಯ ಮಿಟಗಾನಹಳ್ಳಿ ಕ್ವಾರಿಯಲ್ಲಿ ಒಂದೆರಡು ವಾರ ಕಸ ಹಾಕುತ್ತೇವೆ. ಉಲ್ಲಳ್ಳಿ, ಬಾಗಲೂರು ಕ್ವಾರಿಯಲ್ಲಿ ಕಸ ಹಾಕಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ.  ಶುದ್ದ ಬೆಂಗಳೂರು ಅನುದಾನದಲ್ಲಿ ಒಂದು ಸಾವಿರ ಕೋಟಿ ಮೀಸಲಿಡಲಾಗಿದೆ. ಹೀಗಾಗಿ ಸರ್ಕಾರದ ಅನುಮತಿ ದೊರೆತ ಬಳಿಕ ಶೀಘ್ರವೇ ಕಸ ವಿಲೇವಾರಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದ್ದಾರೆ.

ಸಮಸ್ಯೆಗೆ ಕಾರಣವೇನು: ಕಳೆದ ನಾಲ್ಕು ವರ್ಷಗಳಿಂದ ಕಸದ ಟೆಂಡರ್ ಕರೆಯದಿರುವುದು ಸಮಸ್ಯೆಗೆ ಕಾರಣ. ಗಂಗಾಂಬಿಕೆ ಅವರು ಮೇಯರ್ ಆಗಿದ್ದಾಗ ಹಸಿ ಮತ್ತು ಒಣಕಸ ವಿಂಗಡಿಸಿ 46 ಪ್ಯಾಕೇಜ್‍ಗಳಲ್ಲಿ ಟೆಂಡರ್ ಕರೆಯಲಾಗಿತ್ತು.  ಕಾಂಗ್ರೆಸ್ ಅಧಿಕಾರದ ಅವಧಿ ಮುಗಿದು ಕೊನೆಯ ಅವಧಿಯಲ್ಲಿ ಬಿಜೆಪಿಯವರು ಮೇಯರ್ ಆಗಿ ಬಂದಾಗ ಇಂದೂರ್ ಮಾದರಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತದೆ ಎಂದು ಹೇಳಿ ಅದನ್ನು ತಡೆ ಹಿಡಿಯಲಾಗಿತ್ತು. ಅಲ್ಲಿಂದ ಸಮಸ್ಯೆ ಉಲ್ಬಣವಾಗುತ್ತಲೇ ಬಂತು. ಆ 46 ಪ್ಯಾಕೇಜ್‍ಗಳಿಗೆ ಅವಕಾಶ ನೀಡಿದ್ದರೆ ಈ ಸಮಸ್ಯೆ ಈಗ ಬರುತ್ತಿರಲಿಲ್ಲ.

Facebook Comments