ಕಸ ವಿಲೇವಾರಿ ಹೆಸರಲ್ಲಿ ಭೂಮಿ ಕೊಳ್ಳೆ ಹೊಡೆಯುತ್ತಿರುವ ವಿದೇಶಿ ಸಂಸ್ಥೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.13- ನಗರದ ಕಸ ತಿಂದು ಹಾಕ್ತೇವೆ ಎಂದು ಬರುತ್ತಿರುವ ವಿದೇಶಿ ಕಂಪನಿಗಳು ಕೋಟಿ ಕೋಟಿ ಮೌಲ್ಯದ ಭೂಮಿಯನ್ನು ಸ್ವಾಹಾ ಮಾಡುತ್ತಿರುವುದು ಹೆಚ್ಚಾಗುತ್ತಿದೆ.
ನಗರದಲ್ಲಿ ಪ್ರತಿನಿತ್ಯ 450 ಮೆಟ್ರಿಕ್ ಟನ್‍ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತಿದೆ. ಈ ಕಸ ವಿಲೇವಾರಿ ಮಾಡುವುದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಹೇಗಾದರೂ ಮಾಡಿ ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿರುವ ಬಿಬಿಎಂಪಿಗೆ ವಿದೇಶಿ ಕಂಪನಿಗಳು ವಂಚಿಸಿ ಭೂಮಿ ಪಡೆದುಕೊಳ್ಳುತ್ತಿರುವುದು ಮುಂದುವರೆಯುತ್ತಿದೆ. ನಗರದ ಕಸದ ಸಮಸ್ಯೆಯನ್ನು ಹೋಗಲಾಡಿಸುತ್ತೇವೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಜೈವಿಕ ಇಂಧನ ತಯಾರಿಸುತ್ತೇವೆ ಎಂಬ ಹೇಳಿಕೆ ನೀಡಿ ಭೂಮಿ ಪಡೆದು ಇದುವರೆಗೂ ಹಲವಾರು ಸಂಸ್ಥೆಗಳು ಬಿಬಿಎಂಪಿಗೆ ವಂಚಿಸಿವೆ.

ಕಸದ ಸಮಸ್ಯೆಗೆ ಮುಕ್ತಿ ಹಾಡುತ್ತೇವೆ ಎಂದು ಬರುವ ವಿದೇಶಿ ಕಂಪನಿಗಳಿಗೆ ನಮ್ಮ ಸರ್ಕಾರ ಮತ್ತು ಬಿಬಿಎಂಪಿ 10ರಿಂದ 15 ಎಕರೆ ಭೂಮಿಯನ್ನು ಉಚಿತವಾಗಿ ನೀಡುತ್ತಿವೆ.
ಉಚಿತವಾಗಿ ಸಿಗುವ ಭೂಮಿಯನ್ನು ಪಡೆದುಕೊಂಡು ತಮ್ಮ ಸಂಸ್ಥೆ ಆರಂಭಿಸುವ ವಿದೇಶಿ ಕಂಪನಿಗಳು ಕಸ ವಿಲೇವಾರಿ ಮಾಡುವುದನ್ನು ಬಿಟ್ಟು ಪರ್ಯಾಯ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.

ಯಾವ ಯಾವ ಕಂಪನಿಗೆ ಎಷ್ಟೆಷ್ಟು ಭೂಮಿ: ಚೈನಾ ಮೂಲದ ಸತಾರಾಂ ಟೆಕ್ನಾಲಜಿ ಸಂಸ್ಥೆಗೆ ಬಗನದೊಡ್ಡಿ ಬಳಿ 20 ಎಕರೆ ಹಾಗೂ ಕನ್ನಹಳ್ಳಿ ಪ್ಲಾಂಟ್ ಬಳಿ 8 ಎಕರೆ ಭೂಮಿ ನೀಡಲಾಗಿದೆ. ಅಮೆರಿಕ ಮೂಲದ ಎನ್‍ಇಜಿ ಸಂಸ್ಥೆಗೆ ಮಾವಳ್ಳಿ ಬಳಿ 20 ಎಕರೆ ಹಾಗೂ ಫ್ರಮ್ ಗ್ರೀನ್ ಸಂಸ್ಥೆಗೆ 26 ಎಕರೆ ಭೂಮಿ ಮಂಜೂರು ಮಾಡಲಾಗಿದೆ.
ಯುರೋಪ್ ಸಂಸ್ಥೆಯ ಇಂಡಿಯಂ ಪ್ರಾಜೆಕ್ಟ ಸಂಸ್ಥೆಗೆ ದೊಡ್ಡಬಿದರಕಲ್ಲು ಬಳಿ 10 ಎಕರೆ ಭೂಮಿ ನೀಡಲಾಗಿದೆ.

ಇಷ್ಟೆಲ್ಲ ಭೂಮಿ ಪಡೆದಿರುವ ವಿದೇಶಿ ಕಂಪನಿಗಳು ಇದುವರೆಗೂ ತಮ್ಮ ಪ್ಲಾಂಟ್‍ಗಳಲ್ಲಿ ಕಸ ವಿಲೇವಾರಿಯ ಕೆಲಸವನ್ನೇ ಆರಂಭಿಸಿಲ್ಲ. ಆದರೆ ತಮ್ಮ ಸ್ವಂತ ಉದ್ಯೋಗಕ್ಕೆ ಭೂಮಿಯನ್ನು ಬಳಸಿಕೊಳ್ಳುತ್ತಿವೆ. ಇಷ್ಟೆಲ್ಲ ಅಂಕಿಅಂಶ ಇದ್ದರೂ ಮೇಯರ್ ಗೌತಮ್‍ಕುಮಾರ್ ಅವರು ಮತ್ತೆ ನೆದರ್‍ಲ್ಯಾಂಡ್ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ಭೂಮಿ ನೀಡಲು ಮುಂದಾಗಿದ್ದಾರೆ.

ಕಸದ ಸಮಸ್ಯೆ ನಿವಾರಿಸುತ್ತೇವೆ ಎಂದು ಹೇಳಿಕೊಂಡು ನಗರದಲ್ಲಿ ಭೂಮಿ ಪಡೆದಿರುವ ವಿದೇಶಿ ಸಂಸ್ಥೆಗಳು ಕಸ ವಿಲೇವಾರಿ ಕಾರ್ಯ ಆರಂಭಿಸದಿರುವುದನ್ನು ಸ್ಪಷ್ಟಪಡಿಸಿರುವ ವಿಶೇಷ ಆಯುಕ್ತ ರಂದೀಪ್ ಅವರು ಇನ್ನು ಮುಂದೆ ವಂಚಿಸುವ ವಿದೇಶಿ ಸಂಸ್ಥೆಗಳ ಬಣ್ಣದ ಮಾತಿಗೆ ಬಲಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ದಿನದಿಂದ ದಿನಕ್ಕೆ ಕಸವಿಲೇವಾರಿ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ.
ಹೀಗಾಗಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತೇವೆ ಎಂದು ಹೇಳಿಕೊಂಡು ಬರುವ ವಿದೇಶಿ ಕಂಪನಿಗಳ ಕಾರ್ಯ ವೈಖರಿ ಬಗ್ಗೆ ಖಚಿತಪಡಿಸಿಕೊಂಡ ನಂತರವಷ್ಟೇ ಜಾಗ ನೀಡಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ.

ಇದರ ಜೊತೆಗೆ ಈಗಾಗಲೇ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತೇವೆ ಎಂದು ಭೂಮಿ ಪಡೆದು ವಂಚಿಸುತ್ತಿರುವ ವಿದೇಶಿ ಸಂಸ್ಥೆಗಳಿಂದ ಭೂಮಿಯನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ರಂದೀಪ್ ತಿಳಿಸಿದ್ದಾರೆ.

ತ್ಯಾಜ್ಯದ ಸಮಸ್ಯೆ ನಿವಾರಿಸುತ್ತೇವೆಂದು ವಂಚಿಸಿ ಭೂಮಿ ಕಬಳಿಸುತ್ತಿರುವ ಸಂಸ್ಥೆಗಳಿಗೆ ಕಡಿವಾಣ ಹಾಕದಿದ್ದರೆ ಕಸದ ಸಮಸ್ಯೆಗೂ ಪರಿಹಾರ ಸಿಗೊಲ್ಲ. ಭೂಮಿಯೂ ಉಳಿಯೋಲ್ಲ. ಇನ್ನು ಮುಂದಾದರೂ ಬಿಬಿಎಂಪಿಯವರು ಬೇಕಾಬಿಟ್ಟಿ ಭೂಮಿ ಹಂಚಿಕೆ ಮಾಡುವುದನ್ನು ಬಿಟ್ಟು ನೈಜ ಸಂಸ್ಥೆಗಳಿಗೆ ಮಣೆ ಹಾಕಬೇಕಾಗಿದೆ.

Facebook Comments