ಗರೀಬ್ ಕಲ್ಯಾಣ್ ರೋಜ್‍ಗಾರ್ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.20- ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಪರಿಣಾಮ ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ವಲಸೆ ಕಾರ್ಮಿಕರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಕೇಂದ್ರ ಸರ್ಕಾರದ ಉದ್ದೇಶಿತ ಗರೀಬ್ ಕಲ್ಯಾಣ್ ರೋಜ್‍ಗಾರ್ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ವಿದ್ಯುಕ್ತ ಚಾಲನೆ ನೀಡಿದರು.

ಬಿಹಾರದ ಕಗಾರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದಲ್ಲಿ ಪ್ರಾರಂಭಿಕವಾಗಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಎಂ ನರೇಂದ್ರ ಮೋದಿ, ಬಿಹಾರದ ಸಿಎಂ ನಿತೀಶ್‍ಕುಮಾರ್, ಡಿಸಿಎಂ ಸುಶೀಲ್‍ಕುಮಾರ್ ಮೋದಿ, ಐದು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಗರೀಬ್ ಕಲ್ಯಾಣ್ ರೋಜ್‍ಗಾರ್ ಅಭಿಯಾನಕ್ಕೆ ಚಾಲನೆ ಕೊಟ್ಟರು.

ಮೊದಲ ಹಂತದಲ್ಲಿ ಆರು ರಾಜ್ಯಗಳ 116 ಜಿಲ್ಲೆಗಳಲ್ಲಿ ಒಟ್ಟು 125 ದಿನ ಗ್ರಾಮೀಣ ಭಾಗದಲ್ಲಿ ವಲಸೆ ಕಾರ್ಮಿಕರು ಉದ್ಯೋಗಗಳು ಲಭಿಸಲಿದ್ದು. ಇದಕ್ಕಾಗಿ ಸುಮಾರು 50 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ವಿನಿಯೋಗಿಸಲಿದೆ.

ವಲಸೆ ಕಾರ್ಮಿಕರು ಹೆಚ್ಚಾಗಿರುವ ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದರ ಲಾಭ ಪಡೆಯಲಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಒಟ್ಟು 25 ವಿವಿಧ ಬಗೆಯ ಹುದ್ದೆಗಳು ಸೃಷ್ಟಿಯಾಗಲಿವೆ. ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡಿರುವ ಕಾರ್ಮಿಕರು ಈ ಯೋಜನೆ ಮೂಲಕ ಉದ್ಯೋಗ ಗಿಟ್ಟಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ.

ಮುಖ್ಯವಾಗಿ ಮೂಲಭೂತ ಸೌಕರ್ಯಗಳನ್ನು ದುಪ್ಪಟ್ಟುಗೊಳಿಸಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಾಗುವುದು. ಇದರಿಂದ ಗ್ರಾಮೀಣ ಭಾಗಗಳ ಉದ್ಯೋಗ ಹಾಗೂ ವಲಸೆ ಕಾರ್ಮಿಕರು ಸ್ವಾಭಿಮಾನದಿಂದ ಜೀವನ ನಡೆಸಲು ಅನುಕೂಲವಾಗಲಿದೆ.

ಈ ಯೋಜನೆಯನ್ನು 12 ಇಲಾಖೆಗಳ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ರಸ್ತೆಸಾರಿಗೆ ಹೆದ್ದಾರಿ, ಗಣಿ, ಕುಡಿಯುವ ನೀರು ಮತ್ತು ನೈರ್ಮಲೀಕರಣ, ಪರಿಸರ, ರೈಲ್ವೆ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ನವೀಕರಿಸಬಹುದಾದ ಇಂಧನ, ಗಡಿಭಾಗದ ರಸ್ತೆಗಳು, ಟೆಲಿಕಾಂ ಮತ್ತು ಕೃಷಿ ಇಲಾಖೆಗಳ ಮೂಲಕ ಯೋಜನೆ ಜಾರಿಯಾಗಲಿದೆ.

ಮುಖ್ಯವಾಗಿ ಸ್ವಚ್ಚತೆ ಮತ್ತು ನೈರ್ಮಲೀಕರಣ, ಒಳಚರಂಡಿ, ಕೋಳಿ ಸಾಕಾಣಿಕೆ, ಕೃಷಿ ಉತ್ತೇಜನ, ಮೀನು ಸಾಕಾಣಿಕೆ ಸೇರಿದಂತೆ ವಿವಿಧ ಉದ್ಯೋಗಗಳು ಈ ಯೋಜನಾ ವ್ಯಾಪ್ತಿಗೆ ಬರಲಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನವಾಗಲಿದ್ದು, ಇದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ.

ಇನ್ನೊಂದೆಡೆ ಬಿಹಾರದಲ್ಲಿ ವರ್ಷದ ಅಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡೇ ಎನ್‍ಡಿಎ ಮೈತ್ರಿಕೂಟ ಆ ರಾಜ್ಯದಿಂದಲೇ ಯೋಜನೆಗೆ ಚಾಲನೆ ನೀಡಿ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

Facebook Comments