ವಿಶಾಖಪಟ್ಟಣದಲ್ಲಿ ಮತ್ತೊಂದು ವಿಷಾನಿಲ ದುರಂತ, ಇಬ್ಬರ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶಾಖಪಟ್ಟಣಂ, ಜೂ.30- ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮತ್ತೊಂದು ಅನಿಲ ದುರಂತ ಸಂಭವಿಸಿದೆ. ಕಾರ್ಖಾನೆಯೊಂದರಲ್ಲಿ ನಿನ್ನೆ ತಡರಾತ್ರಿ ವಿಷಾನಿಲ ಸೋರಿಕೆಯಿಂದಾಗಿ ಇಬ್ಬರು ಮೃತಪಟ್ಟು, ಇತರ ನಾಲ್ವರು ಅಸ್ವಸ್ಥರಾಗಿದ್ದಾರೆ.

ವಿಶಾಖಪಟ್ಟಣದ ಪರವಾಡ ಪ್ರದೇಶದ ಜವಹರ್‍ಲಾಲ್ ನೆಹರು ಫಾರ್ಮಾ ಸಿಟಿ(ಜೆಎನ್‍ಪಿಸಿ)ಯಲ್ಲಿರುವ ಸೈನರ್ ಲೈಫ್ ಸೈನ್ಸಸ್ ಫಾರ್ಮಾ ಎಂಬ ಔಷಧಿ ತಯಾರಿಕಾ ಕಾರ್ಖಾನೆಯಲ್ಲಿ ನಿನ್ನೆ 11.30ರಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕಾರ್ಖಾನೆಯಿಂದ ಬೆಂಜಿಮಿಡಾಜೋಲ್ ಎಂಬ ವಿಷಾನಿಲ ಸೋರಿಕೆಯಾಯಿತು. ಈ ಸಂದರ್ಭದಲ್ಲಿ ಘಟಕದಲ್ಲಿ 30 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಇವರಲ್ಲಿ ವಿಷಾನಿಲ ಸೇವನೆಯಿಂದ ಆರು ಮಂದಿ ಕುಸಿದುಬಿದ್ದರು.

ಇವರಲ್ಲಿ ನರೇಂದ್ರ ಮತ್ತು ಗೌರಿಶಂಕರ್ ಎಂಬ ಕಾರ್ಮಿಕರು ಮೃತಪಟ್ಟಿದ್ದು, ತೀವ್ರ ಗಾಯಗೊಂಡಿರುವ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾ ಕಲೆಕ್ಟರ್ ವಿ.ವಿನಯ್ ಚಂದ್, ಪೊಲೀಸ್ ಆಯುಕ್ತರಾದ ಆರ್.ಕೆ.ಮೀನಾ ಮತ್ತು ಇತರ ಉನ್ನತಾಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದರು.  ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ವಿಷಾನಿಲ ಹರಡದಂತೆ ತಕ್ಷಣ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪರವಾಡ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಪವನ್ ಕುಮಾರ್ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾಗಿ ಒಬ್ಬರು ಮೃತಪಟ್ಟು, ಕೆಲವರು ಅಸ್ವಸ್ಥರಾಗಿದ್ದರು. ವಿಶಾಖಪಟ್ಟಣದ ಅರ್‍ಆರ್ ವೆಂಕಟಾಪುರಂನಲ್ಲಿರುವ ಎಲ್‍ಜಿ ಪಾಲಿಮರ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕಳೆದ ತಿಂಗಳು ಸ್ಟೆರಿನ್ ವಿಷಾನಿಲ ಸೋರಿಕೆಯಾಗಿ 12 ಮಂದಿ ಮೃತಪಟ್ಟು 500ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments