ಫೀಲ್ಡ್‍ಗಿಳಿದ ಬಿಬಿಎಂಪಿ ಆಡಳಿತಾಧಿಕಾರಿ ಗುಪ್ತಾ, ಅಧಿಕಾರಿಗಳಿಗೆ ಕ್ಲಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪುರ, ಸೆ.12- ನಿನ್ನೆಯಷ್ಟೇ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗೌರವ್ ಗುಪ್ತಾ ಅವರು ನಗರದ ವಿವಿಧೆಡೆ ಸಂಚರಿಸಿ ಕಾಮಗಾರಿ ಪರಿಶೀಲಿಸುವ ಮೂಲಕ ಮೊದಲ ದಿನವೇ ಫೀಲ್ಡ್‍ಗಿಳಿದರು. ರಾಚೇನಹಳ್ಳಿ, ಮಾನ್ಯತಾ ಟೆಕ್‍ಪಾರ್ಕ್ ಸಮೀಪ ಮಳೆ ಅನಾಹುತದಿಂದಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕಾಲುವೆ ಹೂಳೆತ್ತುವ ಕಾರ್ಯ, ಒಳಚರಂಡಿ ಪರಿಸ್ಥಿತಿಯನ್ನು ಪರಾಮರ್ಶಿಸಿದರು.

ಗೆದ್ದಲಹಳ್ಳಿ ಸಮೀಪ ರಸ್ತೆಗಳು ಸರಿಯಿಲ್ಲದಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗುಂಡಿಬಿದ್ದ ರಸ್ತೆಗಳು, ಹಾಳಾದ ರಸ್ತೆಗಳನ್ನು ಕಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗೌರವ್‍ಗುಪ್ತ ಅವರು ಇಷ್ಟು ವರ್ಷದಿಂದ ಬಿಬಿಎಂಪಿಯಲ್ಲಿ ಕೆಲ್ಸ ಮಾಡ್ತಿದ್ದೀರಾ, ಒಂದು ರಸ್ತೆ ಸರಿ ಮಾಡಿಸೋಕ್ಕೆ ಆಗಲ್ವ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅವರು, ಇಂದು ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಸ್ಥಳೀಯರ ಅಹವಾಲು ಕೇಳಿದ್ದೇವೆ. ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಒತ್ತುವರಿ ತೆರವುಗೊಳಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ನೀರು ಸರಾಗವಾಗಿ ಹರಿದು ಹೋಗುವಂತೆ ಡ್ರೈನ್ ವ್ಯವಸ್ಥೆ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಾನಿಗೆ ಒಳಗಾಗದ ಪ್ರದೇಶ ಗಳಿಗೆ ಭೇಟಿ ನೀಡಲಾಗಿದೆ.

ಅಧಿಕಾರಿಗಳಿಗೆ ಮಳೆ ಹಾನಿ ಪ್ರದೇಶಗಳ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಹೊರಮಾವು ವಾರ್ಡ್‍ಗೂ ಇದೇ ಸಂದರ್ಭದಲ್ಲಿ ಭೇಟಿ ಪರಿಶೀಲನೆ ನಡೆಸಿದರು. ಸ್ಥಳೀಯರಾದ ಕೇಶವ , ಕೃಷ್ಣ ಉಪಸ್ಥಿತರಿದ್ದರು.

Facebook Comments