ಸಮರ್ಪಕ ಬೀದಿ ದೀಪ ನಿರ್ವಹಣೆಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ಬೀದಿದೀಪ ಸಮರ್ಪಕ ನಿರ್ವಹಣೆ ಮಾಡದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ದಂಡ ವಿಧಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಇಂದಿಲ್ಲಿ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪ ನಿರ್ವಹಣೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಗೌರವ್ ಗುಪ್ತ ಅವರು ಈ ಆದೇಶ ಹೊರಡಿಸಿದರು.

ಬೀದಿ ದೀಪ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ ಆಡಳಿತಗಾರರು, ಹಲವಾರು ವರ್ಷಗಳಿಂದ ಒಂದೇ ಗುತ್ತಿಗೆ ದಾರರನ್ನು ಮುಂದುವರೆಸಿರು ವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರ ಮೇಲ್ವಿಚಾರಣೆ ಮಾಡಬೇಕಾದ ವಲಯ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ಮಾಡದೆ ಪ್ರತಿ ತಿಂಗಳು ಬಿಲ್ ಪಾವತಿಸುತ್ತಿದ್ದು, ಸಮರ್ಪಕ ನಿರ್ವಹಣೆ ಇಲ್ಲದಿರುವ ಕಡೆ ಸೂಕ್ತ ಕ್ರಮ ಕೈಗೊಂಡು ದಂಡ ವಿಧಿಸಲು ಸೂಚನೆ ನೀಡಿದರು.

ಕಳೆದ ಎರಡು ವರ್ಷಗಳಿಂದ ಕೈಗೊಂಡಿರುವ ಕ್ರಮಗಳ ಕುರಿತು ಆಡಳಿತಗಾರರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾಹಿತಿ ನೀಡಿದರು. ಗ್ಲೋಬಲ್ ಟೆಂಡರ್‍ನಲ್ಲಿ ಸುಮಾರು 4.85 ಲಕ್ಷಗಳ ಬೀದಿ ದೀಪಗಳನ್ನು ಬದಲಾವಣೆ ಮಾಡಲು ಉದ್ದೇಶಿಸಿದ್ದು, 30 ತಿಂಗಳಲ್ಲಿ ಒಟ್ಟು 5 ಹಂತಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.

ಈಗಾಗಲೇ ಮೊದಲನೆ ಹಂತದಲ್ಲಿ ಸುಮಾರು 1 ಲಕ್ಷ ಬೀದಿ ದೀಪಗಳನ್ನು ಅಳವಡಿ ಸಲು ಸರ್ವೆ ಮಾಡಲಾಗುತ್ತಿದೆ. ಈ ಕಾರ್ಯ ಮುಂದಿನ ಏಪ್ರಿಲ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ವಿದ್ಯುತ್ ವಿಭಾಗದಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, 198 ವಾರ್ಡ್‍ಗಳಲ್ಲಿ ಮೇಲ್ವಿಚಾರಣೆ ಮಾಡಲು ವಾರ್ಡ್ ಮಟ್ಟದ ಸಹಾಯಕ ಅಭಿಯಂತರರ ಒಂದು ತಂಡ ರಚಿಸುವುದಾಗಿ ತಿಳಿಸಿದರು.

ಬೀದಿ ದೀಪಗಳ ನಿರ್ವಹಣೆಯಲ್ಲಿ ವಿದ್ಯುತ್ ಉಳಿತಾಯ ಯೋಜನೆಯ ಗ್ಲೊಬಲ್ ಟೆಂಡರ್ ಕರೆದು ಅನುಷ್ಠಾನಗೊಳಿಸಲು ಸಮಯ ಇರುವುದರಿಂದ ಅಲ್ಲಿ ಯವರೆಗೂ ನಿರ್ವಹಣೆ ಮಾಡಲು ಹೊಸದಾಗಿ ಕರೆದಿರುವ ಟೆಂಡರ್‍ಗಳಿಗೆ ಕಾರ್ಯಾದೇಶ ನೀಡಲು ವಿಳಂಬವಾಗುತ್ತಿರುವುದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಗೌರವ್ ಗುಪ್ತ ಸೂಚನೆ ನೀಡಿದರು.

ವಾರ್ಡ್‍ಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಿ ಅವರಿಂದ ಪ್ರತಿ ನಿತ್ಯ ಬರುವ ಸಮಸ್ಯೆಗಳಾದ ರಸ್ತೆ ಗುಂಡಿ, ಕಸ ತೆಗೆಯದಿರುವುದು, ಬೀದಿ ದೀಪ ಉರಿಯುತ್ತಿಲ್ಲದಿರುವ ಮಾಹಿತಿ ಪಡೆದು ಅಂದೇ ಸಮಸ್ಯೆ ಬಗೆಹರಿಸುವ ಕುರಿತಂತೆ ಗಮನ ಹರಿಸುವಂತೆ ಸಲಹೆ ನೀಡಿದರು.

ವಿಶೇಷ ಆಯುಕ್ತ ಮನೋಜ್ ಜೈನ್, ಪ್ರಧಾನ ಅಭಿಯಂತರ ಎಂ.ಆರ್. ವೆಂಕಟೇಶ್, ಮುಖ್ಯ ಅಭಿಯಂತ ಪ್ರಭಾಕರ್ ಮತ್ತು ಎಂಟು ವಲಯಗಳ ವಿದ್ಯುತ್ ವಿಭಾಗದ ಕಾರ್ಯ ಪಾಲಕ ಅಭಿಯಂತರರು ಮತ್ತಿರರು ಭಾಗವಹಿಸಿದ್ದರು.

Facebook Comments