“ಮೇ ತಿಂಗಳೊಳಗೆ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಳಿಸಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ 36 ರಸ್ತೆ ಕಾಮಗಾರಿಗಳನ್ನುಮೇ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತಾಕೀತು ಮಾಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕೈಗೆತ್ತಿಕೊಂಡಿರುವ ರಸ್ತೆ ಕಾಮಾಗಾರಿಗಳ ಪ್ರಗತಿ ಪರಿಶೀಲನೆಯನ್ನು ಗೌರವ್ ಗುಪ್ತ ಅವರು ಸಂಬಂಧಪಟ್ಟ ಅಧಿಕಾರಿಗಳ ಜತೆ ನಡೆಸಿ ಗುತ್ತಿಗೆದಾರರಿಗೆ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಆದೇಶಿಸಿದರು.

ಈ ವೇಳೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಮುಖ್ಯ ಎಂಜಿನಿಯರ್ ರಂಗನಾಥ್ ನಾಯ್ಕ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಾಥ್ ನೀಡಿದರು. ತಿಂಗಳ ಹಿಂದೆ ಐದು ರಸ್ತೆಗಳನ್ನು ಲೋಕಾರ್ಪಣೆ ಮಾಡಲಾಗಿತ್ತು. ಇನ್ನೂ 9 ರಸ್ತೆಗಳ ಲೋಕಾರ್ಪಣೆ ಸದ್ಯದಲ್ಲೇ ಆಗಲಿದೆ. 32 ರಸ್ತೆಗಳನ್ನು ಮೇ ಅಂತ್ಯದಲ್ಲಿ ಮುಕ್ತಾಯ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಈ ವೇಳೆ ಗೌರವ್ ಗುಪ್ತ ಸುದ್ದಿಗಾರರಿಗೆ ತಿಳಿಸಿದರು.

ರಾಜಭವನ ರಸ್ತೆ ಒಂದು ಕಡೆ ಮುಗಿದಿದ್ದು, ಬೀದಿ ದೀಪದ ಕಂಬ ಹಾಗೂ ಸಸಿ ನೆಡುವುದು ಬಾಕಿ ಇದೆ. ಸೈಕಲ್ ಟ್ರ್ಯಾಕ್ ಮಾಡಿ ಮರಗಳ ಸುತ್ತಲಿನ ವಿನ್ಯಾಸ ಒಂದೇ ಮಾದರಿಯಲ್ಲಿರಬೇಕು ಎಂದು ಸೂಚಿಸಿದರು. ರಾಜಭವನ ರಸ್ತೆಯಲ್ಲಿ ಪಾದಚಾರಿ ಕೆಳಸೇತುವೆ ಬಳಕೆಯಾಗದಿದ್ದರೆ ಅದನ್ನು ತೆರವುಗೊಳಿಸಿ ಒಎಫ್‍ಸಿ ಕೇಬಲ್ ಗಳನ್ನು ಕೂಡಲೇ ತೆಗೆದುಹಾಕಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆದೇಶಿಸಿದರು.

ನೆಹರು ತಾರಾಲಯ ರಸ್ತೆಯಲ್ಲೂ ಮರಗಳ ಬಳಿ ನೇತಾಡುತ್ತಿರುವ ಒಎಫ್‍ಸಿ ಕೇಬಲ್ ತೆರವುಗೊಳಿಸಬೇಕು ಎಂದು ಹೇಳಿದರು. ಕಂಟೋನ್ಮೆಂಟ್ ರಸ್ತೆ ಕಾಮಗಾರಿ ಒಂದು ಭಾಗ ಮುಕ್ತಾಯವಾಗಿದ್ದು, ಕೂಡಲೇ ಡಾಂಬರೀಕರಣ ಮಾಡಿ ವಿದ್ಯುತ್ ಕಂಬ ಅಳವಡಿಸಿ ಪಾದಚಾರಿ ಮಾರ್ಗದಲ್ಲಿರುವ ಆರ್‍ಸಿಸಿ ವಿದ್ಯುತ್ ಲೈನ್ ಕಂಬ ಬದಲಾಯಿಸಿ ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದರು.

ಕ್ವೀ£್ಸï ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಆರ್‍ಸಿಸಿ ವಿದ್ಯುತ್ ಕಂಬಗಳು ಶಿಥಿಲವಾಗಿದ್ದು, ಕೂಡಲೇ ಬೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಕೇಬಲ್‍ಗಳನ್ನು ಅಂಡರ್ ಗ್ರೌಂಡ್‍ನಲ್ಲಿ ಅಳವಡಿಸಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಎಂಡಿಗೆ ಸೂಚಿಸಿದರು. ರಾಜಾರಾಂ ಮೋಹನ್ ರಾಯ್ ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗ ಬಹುತೇಕ ಪೂರ್ಣಗೊಂಡಿದ್ದು, ಡಾಂಬರೀಕರಣ ಮಾಡುವಂತೆ ಗೌರವ್‍ಗುಪ್ತ ಗುತ್ತಿಗೆದಾರರಿಗೆ ತಿಳಿಸಿದರು.

ರಾಜಾ ರಾಮ್ ಮೋಹನ್ ರಾಯ್ ರಸ್ತೆ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿರುವುದನ್ನು ಕಂಡು ಇದರಿಂದ ಪಾದಚಾರಿಗಳಿಗೆ ಅನಾನುಕೂಲ ವಾಗಲಿದೆ ಎಂದು ಸ್ಥಳೀಯರು ಹೇಳಿದ್ದಕ್ಕೆ ಸ್ಪಂದಿಸಿದ ಗೌರವ್ ಗುಪ್ತ ಇದನ್ನು ತೆರವುಗೊಳಿಸುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Facebook Comments