ಅವಶ್ಯಕತೆ ಇರುವವರಿಗೆ ಮನೆ ಬಾಗಿಲಲ್ಲಿ ಲಸಿಕೆ ; ಗೌರವ್ ಗುಪ್ತಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.1-ಮಹಾರಾಷ್ಟ್ರ ಮಾದರಿಯಲ್ಲಿ ಅವಶ್ಯಕತೆ ಇರುವವರಿಗೆ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲು ಬಿಬಿಎಂಪಿ ಸಿದ್ದವಿದೆ ಎಂದು ಮುಖ್ಯ ಆಯುಕ್ತ ಗೌರವ್‍ಗುಪ್ತಾ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಈಗಾಗಲೇ 50 ವರ್ಷ ಮೇಲ್ಪಟ್ಟ ಸಾಕಷ್ಟು ಮಂದಿಗೆ ಲಸಿಕೆ ಹಾಕಿದ್ದೇವೆ.

ಇದರ ಜತೆಗೆ ಅಪಾರ್ಟ್‍ಮೆಂಟ್‍ಗಳಿಗೆ ತೆರಳಿ ಶಿಬಿರ ನಡೆಸುವ ಮೂಲಕ ಲಸಿಕೆ ಹಾಕುತ್ತಿದ್ದೇವೆ. ಒಂದು ವೇಳೆ ನಡೆದಾಡಲು ಸಾಧ್ಯವಿಲ್ಲದಂತಹ ವ್ಯಕ್ತಿಗಳಿದ್ದರೆ ಅಂತಹವರ ಮನೆಗೆ ತೆರಳಿ ವ್ಯಾಕ್ಸಿನ್ ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.

ಕಾಲೇಜ್ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗುತ್ತಿದೆ. ಹಾಗಂತ ಕಾಲೇಜ್ ಪ್ರವೇಶಕ್ಕೆ ಆರ್‍ಟಿಪಿಸಿಆರ್ ಪರೀಕ್ಷೆ ಹಾಗೂ ಲಸಿಕೆ ಸರ್ಟಿಫಿಕೆಟ್ ಕಡ್ಡಾಯ ಮಾಡಿಲ್ಲ. ಎಲ್ಲರಿಗೂ ಲಸಿಕೆ ಸಿಗಲಿ ಎಂದು ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.

ಸೋಂಕು ಹೆಚ್ಚಿರುವ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಗಡಿ ಭಾಗಗಳಲ್ಲೇ ಆರ್‍ಟಿಪಿಸಿಆರ್ ಪರೀಕ್ಷೆ ಹಾಗೂ ಲಸಿಕೆ ಸರ್ಟಿಫಿಕೆಟ್ ಪರೀಶಿಲನೆ ನಡೆಸಲಾಗುತ್ತಿದೆ. ನಗರಕ್ಕೆ ಬಂದವರಿಗೆ ಮತ್ತೊಮ್ಮೆ ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಹಾಗಂತ ಸಂಪೂರ್ಣ ಸೋಂಕಿನಿಂದ ನಾವು ಮುಕ್ತರಾಗಿಲ್ಲ. ನಮ್ಮ ನಡುವೆ ಇನ್ನು ವೈರಸ್ ಇದೆ. ಹೀಗಾಗಿ ಪ್ರತಿಯೊಬ್ಬರು ಕಾರ್ ಬೆಲ್ಟ್ ಹಾಗೂ ಹೆಲ್ಮೆಟ್ ರೀತಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸೋಂಕು ಹೋಗಲಾಡಿಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಅನ್‍ಲಾಕ್ ಆಗಿದೆ ಎಂದು ಬೇಕಾಬಿಟ್ಟಿ ಓಡಾಡುವುದು, ಜನಸಂದಣಿ ಪ್ರದೇಶಗಳಿಗೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಿ, ವರ್ತಕರು, ವ್ಯಾಪಾರಿಗಳು ಮತ್ತು ಕಾರ್ಮಿಕರುಗಳು ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

Facebook Comments