ಗೌರಿಯನ್ನು ಹತ್ಯೆ ಆರೋಪಿಗಳ ವಿರುದ್ಧ ಯುಎಪಿಎ ಪ್ರಕರಣ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh

ಬೆಂಗಳೂರು, ಜೂ.4-ದೇಶವನ್ನೇ ತಲ್ಲಣ್ಣಗೊಳಿಸಿದ್ದ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟಿರುವ ಆರೋಪಿಗಳ ವಿರುದ್ಧ ವಿಶೇಷ ತನಿಖಾ ತಂಡ (ಎಸ್‍ಐಟಿ) ಉಗ್ರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದೆ. ಸದ್ಯ ಎಸ್‍ಐಟಿ ವಶದಲ್ಲಿರುವ ನವೀನ್, ಸುಚಿತಕುಮಾರ್ ಅಲಿಯಾಸ್ ಪ್ರವೀಣ್ ಮತ್ತು ಗಿರೀಶ್ ಇವರುಗಳ ವಿರುದ್ಧ ಉಗ್ರ ನಿಗ್ರಹ ಕಾಯ್ದೆ ದಾಖಲಿಸಲು ಎಸ್‍ಐಟಿ ತನಿಖಾ ತಂಡ ನ್ಯಾಯಾಲಯದ ಅನುಮತಿ ಕೇಳಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಭಯೋತ್ಪಾದಕರು, ನಕ್ಸಲೀಯರು ಹಾಗೂ ರಾಷ್ಟ್ರ ದ್ರೋಹಿಗಳ ವಿರುದ್ದ ಈ ಕಾಯ್ದೆಯನ್ನು ಜಾರಿಗೊಳಿಸಿ ತನಿಖೆ ಮಾಡಲಾಗುತ್ತದೆ. ಬಂಧಿತ ಆರೋಪಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಭಾರತದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಬಲ ಕಾಯ್ದೆಯನ್ನೇ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ಹಿಂದೂ ಧರ್ಮದ ವಿರುದ್ಧ ಯಾರೇ ಮಾತನಾಡಿದರೂ ಅಂಥವರನ್ನು ಹತ್ಯೆ ಮಾಡುವುದು ಇವರ ಮೂಲ ಉದ್ದೇಶವಾಗಿತ್ತು. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದೆಂದರೆ ಇವರ ಮೇಲೆ ಭಾರತೀಯ ದಂಡ ಸಂಹಿತೆಯ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸಲು ಎಸ್‍ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಅತ್ಯಂತ ಗಂಭೀರವಾದ ಪ್ರಕರಣವಾಗಿರುವುದರಿಂದ ಎಸ್‍ಐಟಿ ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದೆ. ಪ್ರಕರಣ ಸಂಬಂಧ ಸಂಗ್ರಹಿಸಲಾಗಿರುವ ದಾಖಲೆ ಹಾಗೂ ಸಾಕ್ಷಾಧಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ನಾವು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಿದ್ದೇವೆ. ತನಿಖೆ ಪೂರ್ಣಗೊಳ್ಳುವವರೆಗೂ ನಾವು ಯಾವುದೇ ಮಾಹಿತಿಯನ್ನು ಯಾರ ಬಳಿಯೂ ಹಂಚಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಎಸ್‍ಐಟಿ ವಶದಲ್ಲಿರುವ ಆರೋಪಿಗಳನ್ನು ತನಿಖಾಧಿಕಾರಿಗಳು ತನಿಖೆಗೆ ಒಳಪಡಿಸಿದ್ದು ಕೆಲವು ಮಹತ್ವದ ಸಂಗತಿಗಳನ್ನು ಕಲೆ ಹಾಕಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ನವೀನ್, ಗೌರಿ ಲಂಕೇಶ್ ಹತ್ಯೆ ಮಾಡುವ ಮುನ್ನ ಮೊಬೈಲ್‍ನಲ್ಲಿ ತನ್ನ ಸ್ನೇಹಿತನೊಬ್ಬನ ಜೊತೆ ಮಾತನಾಡಿರುವುದು ಪತ್ತೆಯಾಗಿದೆ. ಸಂಘಟನೆಯೊಂದರ ಕಾರ್ಯಕರ್ತನೊಬ್ಬನ ಜೊತೆ ನವೀನ್ ಮಾತನಾಡಿ ಸದ್ಯದಲ್ಲೇ ಒಂದು ದೊಡ್ಡ ವಿಕೆಟ್ ಪತನವಾಗಲಿದೆ ಎಂದು ಹೇಳಿದ್ದಾನೆ. ಇದನ್ನು ಎಸ್‍ಐಟಿ ಅಧಿಕಾರಿಗಳ ಮುಂದೆ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ.

ಸಾಮ್ಯತೆ:
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಈ ಹಿಂದೆ ಇದೇ ರೀತಿ ಕಗ್ಗೊಲೆಯಾದ ಚಿಂತಕ ಎಂ.ಎಂ.ಕಲ್ಬುರ್ಗಿ, ಮಹಾರಾಷ್ಟ್ರದ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಪ್ರಕರಣಗಳಿಗೂ ಸಾಮ್ಯತೆ ಇರುವುದು ತನಿಖೆ ವೇಳೆ ಕಂಡುಬಂದಿದೆ. ಆರೋಪಿಗಳು ಮೂವರನ್ನು ಒಂದೇ ಮಾದರಿಯಲ್ಲಿ ಕೊಲೆ ಮಾಡಿರುವುದರಿಂದ ಮಹಾರಾಷ್ಟ್ರದ ವಿಶೇಷ ತನಿಖಾ ತಂಡ ಸದಸ್ಯದಲ್ಲೇ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ತಿಳಿದುಬಂದಿದೆ. ಪುಣೆ ನಿವಾಸಿಯಾಗಿರುವ ಅಮೂಲ್ ಕಾಳೆ ಈ ಪ್ರಕರಣದ ಆರೋಪಿಯಾಗಿರುವುದರಿಂದ ಮಹಾರಾಷ್ಟ್ರದ ತನಿಖಾ ತಂಡ ಯಾವುದೇ ಸಂದರ್ಭದಲ್ಲೂ ರಾಜ್ಯಕ್ಕೆ ಆಗಮಿಸಿ ಆರೋಪಿಗಳನ್ನು ಹಸ್ತಾಂತರಿಸುವಂತೆ ಮನವಿ ಮಾಡಿಕೊಳ್ಳಲಿದೆ.

Facebook Comments

Sri Raghav

Admin