ಸ್ಕೂಟರ್ ಏರಿ ಬಿಬಿಎಂಪಿ ಮೇಯರ್ ಸಿಟಿ ರೌಂಡ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, – ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಅವರು ನಿನ್ನೆ ದ್ವಿಚಕ್ರ ವಾಹನದಲ್ಲಿ ನಗರ ಸಂಚಾರ ಮಾಡಿದರು.ಬೆಳಗ್ಗೆ ಮೇಯರ್ ಕಾರ್ಯಪಾಲಕ ಅಭಿಯಂತರರ ಜೊತೆಯಲ್ಲಿ ಪಶ್ಚಿಮ ವಲಯ ಕಚೇರಿಯಿಂದ ಸ್ಕೂಟರ್‍ನಲ್ಲಿ ಸಂಚರಿಸಿ ರಸ್ತೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

ಮಂತ್ರಿಮಾಲ್ ರಸ್ತೆಯಿಂದ ಹೊರಟು ಶ್ರೀರಾಮಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕಾರಿನಲ್ಲಿ ಸಂಚರಿಸಿದರೆ ರಸ್ತೆಗಳಲ್ಲಿನ ಗುಂಡಿಗಳು ಅರಿವಿಗೆ ಬರುವುದಿಲ್ಲ.

ಹಾಗಾಗಿ ಇಂದು ಕಾರ್ಯಪಾಲಕ ಅಭಿಯಂತರರನ್ನು ದ್ವಿಚಕ್ರವಾಹನದಲ್ಲಿ ಕರೆದೊಯ್ದು ನಗರದ ರಸ್ತೆ ಗುಂಡಿಗಳ ದರ್ಶನ ಮಾಡಿಸಿದ್ದೇನೆ ಎಂದು ಹೇಳಿದರು. ಕಾರ್ಯಪಾಲಕ ಅಭಿಯಂತರರಾಗಲಿ, ಜಂಟಿ ಆಯುಕ್ತರಾಗಲಿ ಕಚೇರಿಯಲ್ಲೇ ಕೂರುವ ಬದಲು ಪ್ರತಿ ವಾರ್ಡ್‍ಗಳ ಪ್ರಮುಖ ರಸ್ತೆಗಳು, ಅಡ್ಡರಸ್ತೆಗಳನ್ನು ಪರಿಶೀಲನೆ ಮಾಡಿದರೆ ಸಮಸ್ಯೆಗಳು ನೇರವಾಗಿ ಗಮನಕ್ಕೆ ಬರುತ್ತದೆ ಎಂದು ತಿಳಿಸಿದರು.

ಇನ್ನು ಮುಂದೆ ಸಮಯ ಮಾಡಿಕೊಂಡು ಆಯಾ ವಲಯಗಳ ಜಂಟಿ ಆಯುಕ್ತರು, ಕಾರ್ಯಪಾಲಕ ಅಭಿಯಂತರರು ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆ ಅರಿಯುವಂತೆ ಖಡಕ್ ಸೂಚನೆ ನೀಡಿದ್ದೇನೆ ಎಂದು ಗೌತಮ್ ಕುಮಾರ್ ಹೇಳಿದರು.

Facebook Comments