ನಿರ್ಭಯ ಯೋಜನೆ ಅಳವಡಿಕೆ ಅನುದಾನ ಬಿಡುಗಡೆಗೆ ಸಿಎಂಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20- ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ನಿರ್ಭಯ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮೇಯರ್ ಗೌತಮ್‍ಕುಮಾರ್ ಜೈನ್ ಪತ್ರ ಬರೆದಿದ್ದಾರೆ.

ಮಹಾನಗರ ಪಾಲಿಕೆಯು ಸಹ ನಗರದ ಮಹಿಳೆಯರು ಹಾಗೂ ಮಕ್ಕಳ ಹಿತರಕ್ಷಣೆ ಮತ್ತು ಸ್ವಾವಲಂಬನೆಗಾಗಿ ಕಲ್ಯಾಣ ಕಾರ್ಯಕ್ರಮ ಯೋಜನೆಯಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರ ಪ್ರಗತಿಗೆ ಶ್ರಮಿಸುತ್ತಿರುವುದಲ್ಲದೆ, ಮಹಿಳಾ ಮತ್ತು ಮಕ್ಕಳ ರಕ್ಷಣೆ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜು, ಮುಖ್ಯ ಹಾಗೂ ಅಡ್ಡ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿರ್ವಹಣೆ ಮಾಡುವ ಕಾರ್ಯಗಳನ್ನು ಕೈಗೊಂಡಿದೆ.

ಪ್ರಸ್ತುತ ವಾರ್ಡ್ ನಂ.75- ಶಂಕರಮಠ, 171 ಗುರಪ್ಪನಾಪಾಳ್ಯ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿರ್ವಹಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ಪಾಲಿಕೆ ವತಿಯಿಂದ ಹಣ ವೆಚ್ಚ ಮಾಡಲಾಗುತ್ತಿದೆ. ಇದೇ ರೀತಿ ಪಾಲಿಕೆಯ ಎಲ್ಲಾ ವಾರ್ಡ್‍ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕೇಂದ್ರೀಕೃತ ಕೊಠಡಿಗಳಲ್ಲಿ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದ್ದು, ಹೆಚ್ಚಿನ ಅನುದಾನ ಅವಶ್ಯಕತೆ ಇದೆ.

ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿರ್ಭಯ ಯೋಜನೆಯನ್ನು ಮಾರ್ಗಸೂಚಿಯಂತೆ ಪಾಲಿಕೆಯಲ್ಲಿ ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.

Facebook Comments