ತೆರಿಗೆ ಪಾವತಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಮೇಯರ್ ಗೌತಮ್‍

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.12- ಮಹದೇವಪುರ ಪಾಲಿಕೆಗೆ ಹೆಚ್ಚು ವರಮಾನ ತಂದುಕೊಡುವ ವಲಯವಾಗಿದ್ದು, ಎಲ್ಲ ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಆಸ್ತಿ ತೆರಿಗೆಗೆ ಸೇರ್ಪಡೆಯಾಗದ ಎಲ್ಲ ಆಸ್ತಿಗಳನ್ನು ಕೂಡಲೇ ಸೇರ್ಪಡೆ ಮಾಡಲು ಕ್ರಮ ವಹಿಸಿ ತೆರಿಗೆ ಪಾವತಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮೇಯರ್ ಗೌತಮ್‍ಕುಮಾರ್ ಸೂಚನೆ ನೀಡಿದರು.

ಮಹದೇವಪುರ ವಲಯದಲ್ಲಿ ಆಸ್ತಿ ತೆರಿಗೆ ಸಂಗ್ರಹ ಕುರಿತಂತೆ ವಲಯ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮೇಯರ್, ಎಲ್ಲ ಕಂದಾಯ ಅಧಿಕಾರಿ ಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ತೆರಿಗೆ ಸಂಗ್ರಹಿಸಲು ಸಮಗ್ರ ಯೋಜನೆ ರೂಪಿಸಿಕೊಂಡು ವಾರ್ಡ್ ವಾರು ಕಂದಾಯ ಅಧಿಕಾರಿಗಳು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ವಾರಕ್ಕೆ ಎರಡು ಬಾರಿ ಪರಿಶೀಲನಾ ಸಭೆ ನಡೆಸಿ ತೆರಿಗೆ ಸಂಗ್ರಹಿಸುವ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ತೆರಿಗೆ ಸಂಗ್ರಹಿಸಿರುವ ಬಗ್ಗೆ ವಲಯ ಜಂಟಿ ಆಯುಕ್ತರ ಜತೆ ವಾರಕ್ಕೊಮ್ಮೆ ಪ್ರಗತಿ ಪರಿಶೀಲನಾ ಸಭೆ ಸೇರಬೇಕು. ನಂತರ ವಾರಕ್ಕೆ ಮೂರು ಸಭೆಗಳನ್ನು ನಿಗದಿತ ಸಮಯದಲ್ಲಿ ಮಾಡಿ ಪಾಲಿಕೆಗೆ ಹೆಚ್ಚು ಆದಾಯ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಭೆ ನಡೆಯುವ ಬಗ್ಗೆ ಕಡ್ಡಾಯವಾಗಿ ಸಭಾ ನಡಾವಳಿಗಳನ್ನು ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಯಾವುದೇ ಕಾರಣಕ್ಕೂ ಆಸ್ತಿ ತೆರಿಗೆ ಸಂಗ್ರಹ ಮಾಡುವಲ್ಲಿ ವಿಳಂಬ ಮಾಡ ಬಾರದು. ಜವಾಬ್ದಾರಿ ಯಿಂದ ಕಾರ್ಯ ನಿರ್ವಹಿಸಿ ತೆರಿಗೆ ಬಾಕಿ ಉಳಿಸಿ ಕೊಂಡಿರು ವವರಿಗೆ ನಿರ್ದಾಕ್ಷಿಣ್ಯವಾಗಿ ನೋಟಿಸ್ ಜರಿ ಮಾಡಿ. ಟೋಟಲ್ ಸ್ಟೇಷನ್ ಸರ್ವೆ ಮಾಡುವ ಬಗ್ಗೆ ಸೂಕ್ತ ಕ್ರಮ ವಹಿಸಿ ಎಂದು ಸಲಹೆ ನೀಡಿದರು.

ವಲಯದಲ್ಲಿ ಯಾರ್ಯಾರು ಸುಧಾರಣಾ ಶುಲ್ಕ ಪಾವತಿಸಿಲ್ಲ ಎಂಬುದರ ಸಮರ್ಪಕ ಮಾಹಿತಿ ಸಂಗ್ರಹಿಸಬೇಕು. ನೋಟಿಸ್ ನೀಡಿಯೂ ಹಲವಾರು ವರ್ಷಗಳಿಂದ ಸುಧಾರಣಾ ಶುಲ್ಕ ಪಾವತಿಸದ ಮಾಲೀಕರ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಕ್ರಮ ವಹಿಸಲಾಗುವುದು. ಈ ಬಗ್ಗೆ ನಗರ ಪೊಲೀಸ್ ಆಯುಕ್ತರ ಜತೆ ಚರ್ಚಿಸಲಾಗುವುದು ಎಂದು ಮೇಯರ್ ತಿಳಿಸಿದರು.

ಮೂರು ವರ್ಷ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಕಂದಾಯ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಯಿತು. ಎಲ್ಲ ಅಧಿಕಾರಿಗಳು ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಹಾಗಾದಾಗ ಮಾತ್ರ ಪಾಲಿಕೆ ಹಾಗೂ ಅಧಿಕಾರಿಗಳ ಮೇಲೆ ನಾಗರಿಕರಲ್ಲಿ ಗೌರವ ಬರಲು ಸಾಧ್ಯ ಎಂದರು.

ಪಾಲಿಕೆ ಹೆಚ್ಚು ಆದಾಯ ತರುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದೆ. ತೆರಿಗೆ ಸಂಗ್ರಹದಲ್ಲಾಗಿರುವ ಲೋಪದೋಷ ಗಳನ್ನು ಸರಿಪಡಿಸಿಕೊಂಡು ಎಲ್ಲರೂ ಶ್ರಮವಹಿಸಿ ಕೆಲಸ ಮಾಡಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಲು ಮುಂದಾಗಬೇಕು ಎಂದು ಗೌತಮ್‍ಕುಮಾರ್ ತಿಳಿಸಿದರು.

ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿಶೇಷ ಆಯುಕ್ತ ಬಸವರಾಜು, ಜಂಟಿ ಆಯುಕ್ತ (ಕಂದಾಯ) ವೆಂಕಟಾಚಲಪತಿ, ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments