‘ಆದಿಶಕ್ತಿ ದ್ರೌಪದಮ್ಮ ನಮ್ಮನ್ನು ಕಾಪಾಡ್ತಾಳೆ, ಬೆಂಗಳೂರು ಕರಗ ಮಾಡೇ ಮಾಡ್ತೀವಿ’ : ಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಪ್ಲೇಗ್ ಬಂದಾಗಲೇ ಬೆಂಗಳೂರು ಕರಗ ಮಾಡಿದ್ದೀವಿ. ಈಗ ಕೊರೊನದ ಬಗ್ಗೆ ನಮಗೆ ಯಾವುದೇ ಭೀತಿ ಇಲ್ಲ. ಈ ಬಾರಿ ಕರಗ ಮಹೋತ್ಸವವನ್ನು ಮಾಡಲೇಬೇಕೆಂದು ತಿಗಳ ಸಮುದಾಯದವರು ಪಟ್ಟು ಹಿಡಿದ ಕಾರಣ ಏ.8ರಂದು ಎಂದಿನಂತೆ ನಡೆಯಲಿದೆ. ಮೇಯರ್ ಗೌತಮ್‍ಕುಮಾರ್, ಆಯುಕ್ತ ಅನಿಲ್‍ಕುಮಾರ್, ತಿಗಳ ಸಮುದಾಯದ ಮುಖಂಡರು, ಧರ್ಮರಾಯಸ್ವಾಮಿ ದೇವಾಲ ಯದವರು ಹಾಗೂ ಜನಪ್ರತಿನಿಧಿಗಳೊಂದಿಗೆ ಕರಗ ಮಹೋತ್ಸವ ಕುರಿತು ಇಂದು ಹಮ್ಮಿ ಕೊಂಡಿದ್ದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಹಿಂದೆ ಮಾರಕ ರೋಗ ಪ್ಲೇಗ್, ಕಾಲರ ಬಂದಾಗಲೇ ನಾವು ಕರಗ ಆಚರಿಸಿದ್ದೆವು. ಆದಿ ಶಕ್ತಿ ದ್ರೌಪದಮ್ಮ ಎಲ್ಲರನ್ನೂ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಕರಗ ಉತ್ಸವವನ್ನು ಮಾಡೇ ಮಾಡುತ್ತೇವೆ ಎಂದು ತಿಗಳ ಸಮುದಾಯದವರು ಸಭೆಯಲ್ಲಿ ಕಡಾಖಂಡಿತವಾಗಿ ಹೇಳಿದರು. ಅಗತ್ಯ ಕ್ರಮ:ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಮಾಲ್‍ಗಳಲ್ಲಿ ಗುಂಪು ಗುಂಪಾಗಿ ಜನ ಸೇರಬಾರದು, ಕೊರೊನಾ ವೈರಸ್ ಹರಡುವ ಸಾಧ್ಯತೆ ಇರುತ್ತದೆ ಎಂದು ಆಯುಕ್ತರೇ ಹೇಳಿದ್ದಾರೆ. ಈಗಾಗಲೇ ಕಲಬುರ್ಗಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕರಗ ಉತ್ಸವಕ್ಕೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಏನಾದರು ಹೆಚ್ಚು-ಕಡಿಮೆಯಾದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ವಿಧಾನಪರಿಷತ್ ಸದಸ್ಯ ಹಾಗೂ ತಿಗಳ ಸಮುದಾಯದ ಮುಖಂಡ ಪಿ.ಆರ್.ರಮೇಶ್ ಪ್ರತಿಕ್ರಿಯಿಸಿ, ಹಿಂದಿನ ಕಾಲದಲ್ಲಿ ಮಾರಕ ಪ್ಲೇಗ್ ತಗುಲಿದ್ದಾಗಲೇ ಯಶಸ್ವಿಯಾಗಿ ಕರಗ ಉತ್ಸವ ಮಾಡಿದ್ದೇವೆ. ಬೆಂಗಳೂರಿನಲ್ಲಿ ಕಫ್ರ್ಯೂ ಜಾರಿಯಾಗಿದ್ದಾಗಲೂ ಮಾಡಿದ್ದೇವೆ. ಈ ಕೊರೊನಾಗೆ ನಾವು ಹೆದರುವುದಿಲ್ಲ. ಆದಿ ಶಕ್ತಿ ದ್ರೌಪತಮ್ಮನ ಕೃಪೆ ಇದೆ. ಹಾಗಾಗಿ ಕರಗ ಉತ್ಸವವನ್ನು ಮಾಡೇ ಮಾಡುತ್ತೇವೆ ಎಂದು ಹೇಳಿದರು.

ಏ.8ಕ್ಕೆ ಉತ್ಸವ ಇರುವುದರಿಂದ ಇನ್ನೂ ಬಹಳ ಸಮಯವಿದೆ. ಅಷ್ಟರಲ್ಲಿ ಕೊರೊನಾ ಹಾವಳಿ ತಪ್ಪಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಮೇಯರ್ ಮತ್ತು ಆಯುಕ್ತರು ಮೌನಕ್ಕೆ ಶರಣಾಗಿದ್ದರು. ಕರಗ ಉತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳು ವುದರಿಂದ ಕೊರೊನಾ ವೈರಸ್ ತಗುಲಿ ಏನಾದರು ಅನಾಹುತವಾದರೆ ಬಿಬಿಎಂಪಿ ಹೊರಲಿದೆಯೇ ಎಂಬುದು ಚರ್ಚಿತ ವಿಷಯವಾಗಿದೆ.

ಸಹಕಾರಕ್ಕೆ ಮನವಿ:ಆಯುಕ್ತ ಅನಿಲ್‍ಕುಮಾರ್ ಮಾತನಾಡಿ, ಕರಗ ಉತ್ಸವದಂದು ಶುಚಿತ್ವ ಕಾಪಾಡಲು ಕರಗದವರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು. ಕರಗ ಬೇಕೋ ಬೇಡೋ ಎಂಬುದನ್ನು ಬಿಬಿಎಂಪಿ ಇನ್ನೂ ನಿರ್ಧರಿಸಿಲ್ಲ. ಕರಗ ನಿಲ್ಲಿಸಬೇಕು ಎಂದಿದ್ದರೆ ಒಂದು ಗಂಟೆಯಲ್ಲೇ ನಿಲ್ಲಿಸಬಹುದು. ಕರಗದ ದಿನವೇ ಕೆಂಪೇಗೌಡ ದಿನಾಚರಣೆ ಕೂಡ ನಡೆಯಲಿದೆ ಎಂದು ಹೇಳಿದರು.

ತೆರೆದ ಹಣ್ಣು, ತಿಂಡಿ, ತಿನಿಸು ಮಾರಾಟವನ್ನು ನಿಷೇಧಿಸಲಾಗಿದೆ. ಮಾ.31ರಿಂದ ಕರಗ ಉತ್ಸವ ಪ್ರಾರಂಭವಾಗಬೇಕಿದೆ ಎಂದು ಸಭೆಯ ನಂತರ ತಿಳಿಸಿದರು. ಪಿ.ಆರ್.ರಮೇಶ್ ಮಾತನಾಡಿ, ಒಂದು ವೇಳೆ ಕೊರೊನಾ ಭೀತಿ ಹೆಚ್ಚಾಗಿ ಆತಂಕ ಸೃಷ್ಟಿಯಾದರೆ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿ ಎದುರಾದರೆ ದೇವಸ್ಥಾನ ಮಟ್ಟದಲ್ಲೇ ಕರಗ ನಡೆಸುತ್ತೇವೆ. ಸಾರ್ವಜನಿಕರಿಗೆ ಆಹ್ವಾನ ನೀಡುವುದಿಲ್ಲ ಎಂದು ತಿಳಿಸಿದರು.

ಮೇಯರ್ ಗೌತಮ್ ಕುಮಾರ್ ಮಾತನಾಡಿ, ಯಾವ ರೀತಿ ಕರಗ ಆಚರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಅರ್ಚಕರು, ತಿಗಳ ಸಮುದಾಯದ ಮುಖಂಡರು ಸಲಹೆ ನೀಡಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ದೇವಸ್ಥಾನ ವೀಕ್ಷಣೆ ಮಾಡಲು ನಿರ್ಧರಿಸಿದ್ದೇವೆ. ಕರಗ ಸಾಗುವ ದಾರಿಯಲ್ಲಿ ಸಂಪೂರ್ಣ ಸ್ವಚ್ಛತೆಗೆ ಸೂಚನೆ ನೀಡಿದ್ದೇವೆ ಎಂದರು.

Facebook Comments