ಬಿಬಿಎಂಪಿ ಮೇಯರ್ ಕಚೇರಿ ಸೀಲ್‍ಡೌನ್, ಗೌತಮ್‍ಕುಮಾರ್ ಗೆ ಕ್ವಾರಂಟೈನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.8-ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರ ಆಪ್ತ ಸಹಾಯಕನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಮೇಯರ್ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ.  ಮೇಯರ್ ಅವರನ್ನು ಐದು ದಿನಗಳ ಕಾಲ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.

ಐದು ದಿನಗಳ ನಂತರ ಅವರ ಗಂಟಲು ದ್ರವ ಪಡೆದು ಕೊರೊನಾ ಪರೀಕ್ಷೆ ನಡೆಸಲು ಆರೋಗ್ಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೇಯರ್ ಕಚೇರಿ, ಉಪಮೇಯರ್ ಕಚೇರಿ ಹಾಗೂ ಆಯುಕ್ತ ಅನಿಲ್‍ಕುಮಾರ್ ಅವರ ಕಚೇರಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.

ಬಿಬಿಎಂಪಿಯಲ್ಲಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಕೇಂದ್ರ ಕಚೇರಿಗೆ ಸಾರ್ವಜನಿಕರು ಬರದಂತೆ ನಿರ್ಬಂಧಿಸಲಾಗಿದೆ.ಸಮಸ್ಯೆಗಳುಳ್ಳವರು ಬಿಬಿಎಂಪಿ ಪ್ರವೇಶ ದ್ವಾರದಲ್ಲಿ ಇಟ್ಟಿರುವ ಟಪಾಲ್ ಬಾಕ್ಸ್‍ನಲ್ಲಿ ಪತ್ರಗಳನ್ನು ಹಾಕಿ ಹೋಗಬಹುದಾಗಿದೆ.

ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳನ್ನು ಪ್ರವೇಶ ದ್ವಾರದಲ್ಲೇ ಪರೀಕ್ಷೆಗೊಳಪಡಿಸಿ ಒಳಬಿಡಲಾಗುತ್ತಿದೆ.  ಮೇಯರ್ ಆಪ್ತ ಸಹಾಯಕನಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಅವರೊಂದಿಗೆ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚಿ ಎಲ್ಲರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸುವಂತೆ ಆಯುಕ್ತ ಅನಿಲ್‍ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Facebook Comments