ಜನಪ್ರತಿನಿಧಿ, ಅಧಿಕಾರಿಗಳ ಜಟಾಪಟಿ : ಪಾಲಿಕೆ ಮೊದಲ ಸಾಮಾನ್ಯ ಸಭೆ ಹೈರಾಣು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮಾ.7- ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಜಟಾಪಟಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮೊದಲ ಸಾಮಾನ್ಯ ಸಭೆ ಹೈರಾಣಾಗಿ ಹೋಯಿತು. ಪಾಲಿಕೆ ಆಯುಕ್ತ ಭೂಬಾಲನ್ ಹಾಗೂ ಪಾಲಿಕೆ ಸದಸ್ಯರ ನಡುವಿನ ಅಧಿಕಾರವೇ ಸಭೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿತು.

ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಮೇಯರ್ ಲಲಿತಾರವೀಶ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆಯುಕ್ತ ಭೂಬಾಲನ್ ಅವರು ಪೌರಕಾರ್ಮಿರನ್ನು ಒಂದು ವಾರ್ಡ್‍ನಿಂದ ಇನ್ನೊಂದು ವಾರ್ಡ್‍ಗೆ ವರ್ಗಾವಣೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಸದಸ್ಯರು ಮುಗಿ ಬಿದ್ದರು.

ಸುಮಾರು ವರ್ಷಗಳಿಂದ ಒಂದೇ ವಾರ್ಡ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವವರ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದ್ದು, ಪಾಲಿಕೆಯಲ್ಲಿ ಬೇರು ಬಿಟ್ಟಿರುವ ಎಲ್ಲ ಅಧಿಕಾರಿಗಳಿಗೂ ಇದು ಅನ್ವಯವಾಗಲಿದೆ ಎಂದು ಆಯುಕ್ತರು ಸ್ಪಷ್ಟನೆ ನೀಡಿದ ನಂತರವೂ ನಮಗೆ ಆ ಪೌರ ಕಾರ್ಮಿಕರೇ ಬೇಕು ಎಂದು ಸದಸ್ಯರು ಪಟ್ಟು ಹಿಡಿದರು.

ಪಾಲಿಕೆಯ ಆರೋಗ್ಯ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯ ನಯಾಜï ಅಹ್ಮದ್ ಮಾತನಾಡಿ, ಪೌರ ಕಾರ್ಮಿಕರನ್ನು ಮೊದಲಿನ ಸ್ಥಳಕ್ಕೆ ನಿಯುಕ್ತಿ ಮಾಡಿ ಎಂದು ಆಯುಕ್ತರಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಮಾಡಿದರೂ ಅದಕ್ಕೆ ಮನ್ನಣೆ ನೀಡುತ್ತಿಲ್ಲ, ಸದಸ್ಯರಿಗೆ ಮಾತಿಗೆ ಗೌರವ ನೀಡುತ್ತಿಲ್ಲ, ಸಾಮಾಜಿಕ ಸ್ಥಾಯಿ ಸಮಿತಿ ಸೇರಿದಂತೆ ಎಲ್ಲರಿಗೂ ಏನೇನು ಕೆಲಸ ಮಾಡಬೇಕು ಎನ್ನುವುದನ್ನು ಆಯುಕ್ತರು ಹೇಳಿದರೆ ಅಷ್ಟಕ್ಕೆ ಸೀಮಿತವಾಗಿರುತ್ತೇವೆ, ಪೌರ ಕಾರ್ಮಿಕರನ್ನು ವರ್ಗಾವಣೆಗೊಳಿಸಿದಂತೆ ಚುನಾಯಿತ ಜನಪ್ರತಿನಿಧಿಗಳು ಇಷ್ಟೊಂದು ಕೇಳಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಉಪಮೇಯರ್ ರೂಪಶ್ರೀ, ವಿಧಾನ ಪರಿಷತ್ ಸದಸ್ಯ ಟಿ.ಸಿ.ಕಾಂತರಾಜು, ಆರೋಗ್ಯಾಧಿಕಾರಿ ನಾಗೇಶ್, ಸದಸ್ಯರಾದ ಮಲ್ಲಿಕಾರ್ಜುನ್, ಕುಮಾರ್, ವಿಷ್ಣುವರ್ಧನ್, ಮನು, ಪ್ರಭಾವತಿ ಸುಧೀಶ್ವರ್, ಮಂಜುನಾಥ್, ರಮೇಶ್‍ಬಾಬು, ಲಕ್ಷ್ಮೀನರಸಿಂಹರಾಜು, ಗಿರಿಜಾ ಧನಿಯಾಕುಮಾರ್, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Facebook Comments